ಮಾ.16 ಮತ್ತು 17 ರಂದು ಬಂಜಾರ ಸಮುದಾಯದ ಅಸ್ಮಿತೆ ‘ಗೋರ್‌ಮಾಟಿ’

4
Published on

ಮೈಸೂರು: ರಂಗಕರ್ಮಿ ಸಿ.ಬಸವಲಿಂಗಯ್ಯ ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ನಾಟಕದ ನಂತರ ಪ್ರಯೋಗಿಸುತ್ತಿರುವ ಮಹತ್ವದ ಬಂಜಾರ ಸಮುದಾಯದ ಅಸ್ಮಿತೆಯ ಕಾವ್ಯಕಥನ ‘ಗೋರ್‌ಮಾಟಿ’ ನಾಟಕವನ್ನು ಪ್ರದರ್ಶನಕ್ಕೆ ಅಣಿಗೊಳಿಸಿದ್ದು, ಮಾ.16 ಮತ್ತು 17 ರಂದು ಮೊದಲ ಪ್ರಯೋಗ ಪ್ರದರ್ಶನ ನಡೆಯಲಿದೆ.

ಬಜೆಟ್‌ನಲ್ಲಿ ಬಂಜಾರ ಬುಡಕಟ್ಟು ಉತ್ಸವ ಘೋಷಿಸಿದ್ದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಸೂಚನೆ ಮೇರೆಗೆ ಬಂಜಾರ ಸಮುದಾಯದ ಜೀವನ ಕತೆಯನ್ನು ರಂಗರೂಪಕ್ಕಿಳಿಸಲಾಗಿದೆ. ಗೋರ್‌ಮಾಟಿ ಎಂದರೆ ನಮ್ಮ ಜನ ಎಂದರ್ಥ. ಬಂಜಾರ ಜನಾಂಗದ ಸಂತೋಷ, ಸುಖ-ದುಃಖಗಳು ನಾಟಕದಲ್ಲಿವೆ. ಚರಿತ್ರೆಯಲ್ಲಿ ಇವರ ಬದುಕು ಹೇಗೆ ದುರಂತಮಯವಾಗಿದೆ ಎಂಬುದನ್ನು ನಾಟಕ ರೂಪದಲ್ಲಿ ಕಟ್ಟಿಕೊಡಲಾಗಿದೆ.

ಬಂಜಾರರು ವ್ಯಾಪಾರಿಗಳಾಗಿದ್ದು, ಒಂದು ಕಡೆ ನೆಲೆಸುವವರಲ್ಲ. ಪಶು ಸಂಗೋಪನಾ ಪಾಲಕರಾಗಿ, ಕೃಷಿ ಕಾರ್ಮಿಕರಾಗಿ, ಸ್ವಾತಂತ್ರ್ಯ ಹೋರಾಟದಲ್ಲಿ ಗುಪ್ತಚರರಾಗಿ, ಶ್ರಮಜೀವಿಗಳಾಗಿ ತಮ್ಮದೇ ವಿಶಿಷ್ಟ ಸಾಂಸ್ಕೃತಿಕ ಆಚರಣೆ, ಸಂಪ್ರದಾಯ, ಉಡುಗೆ ತೊಡುಗೆಯಿಂದ ಜಗತ್ತಿನ ಗಮನ ಸೆಳೆಯುವ ಬಂಜಾರ ಸಮುದಾಯ ಮುಖ್ಯವಾಹಿನಿಗೆ ಬರಲು ಇನ್ನೂ ಹೆಣಗಾಡುತ್ತಿದೆ. ಅವರ ದುಃಖದುಮ್ಮಾನಗಳಿಗೆ ಕಲೆ, ಸಂಸ್ಕೃತಿ ಅಭಿವ್ಯಕ್ತಿಯ ಪ್ರಕ್ರಿಯೆ ಈ ರಂಗಪ್ರಯೋಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net