ಮಾರ್ಚ್ 10ರಂದು ಅಸ್ಪೃಶ್ಯತೆ ಅಳಿಯಲಿ, ಮನುಷ್ಯತ್ವ ಉಳಿಯಲಿ ವಿಷಯ ಕುರಿತು ವಿಚಾರಸಂಕಿರಣ

Published on

ಮೈಸೂರು: ದಲಿತ ಸಂಘರ್ಷ ಸಮಿತಿ(ಸಂಯೋಜಕ) ಜಿಲ್ಲಾ ಸಮಿತಿಯಿಂದ ಮಾ.10ರಂದು ನಗರದಲ್ಲಿ ಅಸ್ಪೃಶ್ಯತೆ ಅಳಿಯಲಿ, ಮನುಷ್ಯತ್ವ ಉಳಿಯಲಿ ವಿಷಯ ಕುರಿತು ವಿಚಾರಸಂಕಿರಣ ಆಯೋಜಿಸಲಾಗಿದೆ ಎಂದು ರಾಜ್ಯ ಸಂಘಟನಾ ಸಂಯೋಜನಾಧಿಕಾರಿ ದೇವಗಳ್ಳಿ ಸೋಮಶೇಖರ್ ಹೇಳಿದರು.
ಪುರಭವನದಲ್ಲಿ ಅಂದು ಬೆಳಗ್ಗೆ 11ಕ್ಕೆ ಆಯೋಜಿಸಿರುವ ವಿಚಾರ ಸಂಕಿರಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸುವರು. ಸಚಿವ ಸತೀಶ್ ಜಾರಕಿಹೊಳಿ ಆಶಯ ಭಾಷಣ ಮಾಡುವರು. ಸಮಿತಿಯ ವಿ.ನಾಗರಾಜ್ ಅಧ್ಯಕ್ಷತೆ ವಹಿಸುವರು. ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ, ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಎಸ್.ಸಿ. ಬಸವರಾಜು ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ವರಿಗೂ ಸಾಮಾಜಿಕ ನ್ಯಾಯ, ಸರ್ವಧರ್ಮ ಸಮನ್ವಯತೆ: ಡಾ.ಬಿ.ಆರ್.ಅಂಬೇಡ್ಕರ್, ಜಾತಿ ವಿನಾಶದ ಹಾದಿಯಲ್ಲಿ ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ-ಪರಿಕಲ್ಪನೆ ಮತ್ತು ಪ್ರಸ್ತುತತೆ, ಅಸ್ಪೃಶ್ಯತೆ ಮತ್ತು ಜಾತಿ ಪದ್ಧತಿ ನಿರ್ಮೂಲನೆ-ಬಸವಣ್ಣನವರ ಆಶಯಗಳು ವಿಷಯ ಕುರಿತು ವಿಚಾರ ಗೋಷ್ಠಿಗಳು ನಡೆಯಲಿವೆ ಎಂದು ತಿಳಿಸಿದರು.
ಸಮಿತಿ ಪದಾಧಿಕಾರಿಗಳಾದ ಬೆಲವತ್ತ ರಾಮಚಂದ್ರ, ಕಾರ್ಯ ಬಸವಣ್ಣ, ಅರ್ಜುನಹಳ್ಳಿ ಕಾಂತರಾಜು, ಮಂಜುನಾಥ ಮುರುಡಗಳ್ಳಿ, ಪ್ರಸನ್ನ ತಳೂರು, ಗಂಗಾಧರ ಹೈವೇ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net