ಜೂ.7ರಂದು ಆಲೂರಿನಲ್ಲಿ ಅಡ್ಡಪಲ್ಲಕಿ ಮಹೋತ್ಸವ

IMG_20240603_121350
ಪತ್ರಿಕಾ ಕಚೇರಿಯಲ್ಲಿ ಆಲೂರು ತಾಲೂಕು ವೀರಶೈವ-ಲಿಂಗಾಯತ ಸಮಾಜದ ಅಧ್ಯಕ್ಷ ರೇಣುಕಾಪ್ರಸಾದ್ ಮಾತನಾಡಿದರು.
Published on

ಆಲೂರು: ಆಲೂರು ತಾಲೂಕು ವೀರಶೈವ-ಲಿಂಗಾಯತ ಸಮಾಜ ವತಿಯಿಂದ ಜೂ.7 ರಂದು ಆಲೂರಿನಲ್ಲಿ ಜಗದ್ಗುರು ಪ್ರಸನ್ನ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕಿ ಮಹೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭ ಆಯೋಜಿಸಲಾಗಿದೆ ಎಂದು ಸಮಾಜದ ಅಧ್ಯಕ್ಷ ರೇಣುಕಾ ಪ್ರಸಾದ್ ತಿಳಿಸಿದರು.


ಇದೇ ಮೊದಲ ಬಾರಿಗೆ ಆಲೂರು ತಾಲೂಕಿನಲ್ಲಿ ಶ್ರೀಮದ್ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ, ಧರ್ಮ ಜಾಗೃತಿ ಸಮ್ಮೇಳನ ನಡೆಯುತ್ತಿದೆ. ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವವು ಪೂರ್ಣಕುಂಭ, ಕಲಾ ಮೇಳಗಳೊಂದಿಗೆ ಪಟ್ಟಣದ ಕೆಇಬಿ ಮುಂಭಾಗದಲ್ಲಿರುವ ಶ್ರೀ ಸಂಗಮೇಶ್ವರ ದೇವಸ್ಥಾನದಿಂದ ಆರಂಭಗೊಂಡು, ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾಲೂಕು ವೀರಶೈವ-ಲಿಂಗಾಯತ ಕಲ್ಯಾಣ ಮಂಟಪದಲ್ಲಿ ಅಂತ್ಯಗೊಳ್ಳಲಿದೆ. ಕಾರ್ಜುವಳ್ಳಿ ಶ್ರೀ ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ.ಸದಾಶಿವ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಉತ್ಸವ ಜರುಗಲಿದ್ದು, ಸರ್ವ ಸಮಾಜಗಳ ಸದ್ಭಕ್ತರು ಉತ್ಸವದಲ್ಲಿ ಭಾಗವಹಿಸಬೆಕು ಎಂದು ಸುದ್ದಿಗೋಷ್ಠಿಯಲ್ಲಿ ಕೋರಿದರು.
ಉತ್ಸವದ ಬಳಿಕ ಬಸವೇಶ್ವರ ಶಾಲಾ ಮೈದಾನದಲ್ಲಿ ಧರ್ಮ ಜಾಗೃತಿ ಸಮ್ಮೇಳನ ನಡೆಯಲಿದೆ. ಸಮಾರಂಭಕ್ಕೆ ಆಗಮಿಸುವ ಎಲ್ಲ ಸದ್ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಆಲೂರು ತಾಲೂಕು ವೀರಶೈವ-ಲಿಂಗಾಯತ ಸಮಾಜದ ಉಪಾಧ್ಯಕ್ಷ ಡಿ.ಎಸ್.ಜಯಣ್ಣ, ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಶಿವಮೂರ್ತಿ, ಸಹ ಕಾರ್ಯದರ್ಶಿ ಡಾ.ಜಯರಾಜ್, ಖಜಾಂಚಿ ತೀಕ್‌ರಾಜ್, ಟಿಎಪಿಸಿಎಂಎಸ್ ನಿರ್ದೇಶಕ ಮಾವನೂರು ಮೋಹನ್ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net