ಜೂ.21 ರಂದು ಹಿರಿಯ ಪತ್ರಕರ್ತ ರಮೇಶ್ ಉತ್ತಪ್ಪ ರಚಿತ ಯೋಗ ಸಂಗೀತ, ಮೈಸೂರು ಪರಂಪರೆ’ ಕೃತಿ ಬಿಡುಗಡೆ

book
Published on

ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಹಿರಿಯ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರ ‘ಯೋಗ ಸಂಗೀತ, ಮೈಸೂರು ಪರಂಪರೆ’ ಕೃತಿ ಬಿಡುಗಡೆ, ಯೋಗ ದರ್ಶಿನಿ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉತ್ತನಹಳ್ಳಿಯ ಭಾರತೀ ಯೋಗಧಾಮದಲ್ಲಿ ಜೂ.21 ರಂದು ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿದೆ.

ಮೈಸೂರಿನ ಓದುಗ ಪ್ರಕಾಶನ, ಮೈಸೂರು ಕಲ್ಚರಲ್ ಅಸೋಸಿಯೇಷನ್ ಹಾಗೂ ಭಾರತೀ ಯೋಗಧಾಮದ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮವನ್ನು ಭಾರತೀಯ ಯೋಗಧಾಮದ ಸಂಸ್ಥಾಪಕ ಡಾ.ಕೆ.ಎಲ್.ಶಂಕರನಾರಾಯಣ ಜೋಯ್ಸ ಉದ್ಘಾಟಿಸಲಿದ್ದಾರೆ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಮೈಸೂರು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಎ.ಪಿ.ನಾಗೇಶ್, ಲೇಖಕ ಐತಿಚಂಡ ರಮೇಶ್ ಉತ್ತಪ್ಪ, ಓದುಗ ಪ್ರಕಾಶನದ ಪ್ರಕಾಶ್ ಚಿಕ್ಕಪಾಳ್ಯ ಭಾಗವಹಿಸಲಿದ್ದಾರೆ.

ಇದೇ ವೇಳೆ ಹಿರಿಯ ಯೋಗಪಟುಗಳಾದ ಡಾ. ಪಿ.ಎನ್.ಗಣೇಶ್ ಕುಮಾರ್, ಡಾ. ಎ.ಎಸ್.ಚಂದ್ರಶೇಖರ್ ಅವರಿಗೆ ‘ದಿ ಸ್ಟಾರ್ ಆಫ್ ಯೋಗ’ ಪ್ರಶಸ್ತಿ ಹಾಗೂ ಯೋಗದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದಿರುವ ಎಚ್.ಖುಷಿ, ಅಮೂಲ್ಯಾ ನಾರಾಯಣ್, ಆರ್. ಅಂಕಿತಾ ಅವರಿಗೆ ‘ದಿ ರೈಸಿಂಗ್ ಸ್ಟಾರ್ ಆಫ್ ಯೋಗ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಎಂ.ವಿ.ಯೋಗಾಸ್ ಸಂಸ್ಥೆಯ ಯೋಗಪಟುಗಳಿಂದ ‘ಯೋಗ ನೃತ್ಯ’ ಹಾಗೂ ಭಾರತೀ ಯೋಗಧಾಮದ ಯೋಗಪಟುಗಳಿಂದ ‘ಯೋಗ ದರ್ಶಿನಿ’ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net