ಫೆ.2ಕ್ಕೆ ‘ಯುಗೇ ಯುಗೇ’ ಮಹಾಕಾವ್ಯಗಳ ಮಹಾಮಿಲನ;ಪೌರಾಣಿಕ ನಾಟಕ

yuge
Published on

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು ಇದೇ ಮೊದಲ ಬಾರಿಗೆ ಪೌರಾಣಿಕ ನಾಟಕಗಳ ಕಲಾವಿದರಗಾಗಿ ಹಮ್ಮಿಕೊಂಡಿರುವ 40 ದಿನಗಳ ವಿಶೇಷ ಶಿಬಿರದಲ್ಲಿ ಆಧುನಿಕ ಚೌಕಟ್ಟಿನಲ್ಲಿ ರಂಗಕಲೆಯ ತರಬೇತಿಯನ್ನು ನೀಡಲಾಗುತ್ತಿದೆ. ಇದೇ ವೇಳೆ ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳ ಮಹಾಮಿಲನವಾಗಿ ‘ಯುಗೇ ಯುಗೇ’ ಎಂಬ ನೂತನ ನಾಟಕವನ್ನು ಸಿದ್ಧಪಡಿಸಿದೆ.

ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಆನೇಕಲ್, ಸೂಲಿಬೆಲೆ ಇತ್ಯಾದಿ ಸ್ಥಳಗಳಿಂದ ಸುಮಾರು 80ಕ್ಕೂ ಹೆಚ್ಚಿನ ಪೌರಾಣಿಕ ಕಲಾವಿದರು ಶಿಬಿರದಲ್ಲಿ ಪಾಲ್ಗೊಂಡಿದ್ದು, ಹೊಸ ಆಯಾಮದಲ್ಲಿ ಪೌರಾಣಿಕ ರಂಗಕಲೆಯ ತರಬೇತಿಯನ್ನು ಪಡೆಯುವುದರ ಜೊತೆಗೆ ವಿನೂತನ ಪ್ರಯತ್ನವಾಗಿರುವ ಮಹಾಕಾವ್ಯಗಳ ಮಹಾಮಿಲನದ ನಾಟಕದಲ್ಲಿ ಅಭಿನಯಿಸುತ್ತಿದ್ದಾರೆ.

ಫೆ.2ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ‘ಯುಗೇ ಯುಗೇ’ ಎಂಬ ವಿಭಿನ್ನ ನಾಟಕ ಪ್ರದರ್ಶನ ನಡೆಯಲಿದೆ. ಮೂಲ ಕಾವ್ಯದ ಆಶಯಕ್ಕೆ ಧಕ್ಕೆಯಾಗದಂತೆ ಆಧುನಿಕ ಆಯಾಮದಲ್ಲಿ ಎರಡು ಕಾವ್ಯಗಳನ್ನು ಒಂದೇ ರಂಗದ ಮೇಲೆ ತರುವ ಪ್ರಯತ್ನ ಮಾಡಲಾಗಿದೆ. ಹೆಸರಾಂತ ರಂಗಕರ್ಮಿ ಡಾ.ಎಸ್.ಎಲ್.ಎನ್ ಸ್ವಾಮಿ ನಿರ್ದೇಶನ, ರಂಗವಿನ್ಯಾಸದೊಂದಿಗೆ ನಾಟಕದ ತಾಲೀಮು ನಡೆಯುತ್ತಿದೆ. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿಯವರ ಆಶಯದಂತೆ ಕರುನಾಡ ರಂಗಕಲಾವಿದರ ಒಕ್ಕೂಟವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಈ ನಾಟಕವನ್ನು ಪ್ರಸ್ತುತಿ ಪಡಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net