ಫೆ.18ರಂದು ಮಾತಾ ಅಮೃತಾನಂದಮಯಿ ಮಠದ ಪ್ರತಿಷ್ಠಾ ವರ್ಧಂತಿ ಮಹೋತ್ಸವ

Published on

ಮಂಗಳೂರು: ಮಂಗಳೂರಿನ ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಫೆ.18ರಂದು ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ಜರಗಲಿವೆ ಎಂದು ಮಂಗಳೂರಿನ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಅಮೀನ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಲಲಿತಾ ಅಷ್ಟೋತ್ತರ ಪಠಣದೊಂದಿಗೆ ಕಾರ್ಯಕ್ರಮ ಆರಂಭಿಸಲಿದ್ದಾರೆ. ಮುಂಜಾನೆ 5.30ರಿಂದ ಮಂಗಳೂರಿನ ರುದ್ರಾಧ್ಯಾಯಿ ತಂಡದವರಿಂದ ರುದ್ರಪಠಣ, ವೇದಮಂತ್ರ ಪಠಣ ಮತ್ತು ರುದ್ರಪೂಜೆ ನಡೆಯಲಿದೆ. ಅನಂತರ ಡಾ.ವಸಂತ ಕುಮಾರ ಪೆರ್ಲ ಅವರು ಬ್ರಹ್ಮಸ್ಥಾನದ ಬಗ್ಗೆ ರಚಿಸಿರುವ ಗೀತೆ ಬಿಡುಗಡೆಯಾಗಲಿದೆ. ಬೆಳಗ್ಗೆ 9ರಿಂದ ಸಾರ್ವಜನಿಕ ಮಹಾಧನ್ವಂತರಿ ಹೋಮ, ಮಧ್ಯಾಹ್ನ 2ರಿಂದ 3.30ರವರೆಗೆ ಭಜನೆ, 4ರಿಂದ 5.30ರವರೆಗೆ ಹರಿಕಥೆ, ಕಥಾಪ್ರವಚನ, ಶಿವಪಾರ್ವತಿ ಕಲ್ಯಾಣ ನಡೆಯಲಿದೆ. ಬಳಿಕ ಕಲಶಪೂಜೆ, ಮಹಾ ಅಭಿಷೇಕ, ವಿವಿಧ ಭಜನಾ ತಂಡದವರಿಂದ ಕುಣಿತ ಭಜನೆ ಮೊದಲಾದವು ಜರಗಲಿವೆ. ಅಲ್ಲದೆ ವಿಶೇಷ ಲೇಖನ ಯಜ್ಞ ಹಮ್ಮಿಕೊಳ್ಳಲಾಗಿದೆ ಎಂದರು.

ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರಾಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಡಾ. ವಸಂತ ಕುಮಾರ ಪೆರ್ಲ, ಸೇವಾ ಸಮಿತಿಯ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಎಸ್, ಕ್ಷೇತ್ರಾಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಡಾ. ದೇವದಾಸ ಪುತ್ರನ್, ಸಂಘಟನಾ ಕಾರ್ಯದರ್ಶಿ ಯೋಗೀಶ್ ಸಾಲ್ಯಾನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net