

ಚಿಕ್ಕಬಳ್ಳಾಪುರ:ಪಶ್ಚಿಮ ಬಂಗಾಳದಲ್ಲಿ ಕರ್ತವ್ಯ ನಿರ್ವಹಣೆ ವೇಳೆ ಗೌರಿಬಿದನೂರು ತಾಲೂಕಿನ ತೊಂಡೆಬಾವಿ ಗ್ರಾಮದ ಯೋಧ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಗ್ರಾಮದ ಗಂಗಾಧರಪ್ಪ(54) ಮೃತ. ಐಟಿಬಿಪಿ ಯೋಧನಾಗಿ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಸಿಕ್ಕಿಂ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ವಿವಿಧ ಗಡಿ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿ ಸೇವೆ ಸಲ್ಲಿಸುತ್ತಿದ್ದರು. ರಾತ್ರಿ ಮೊಬೈಲ್ ಮೂಲಕ ಕುಟುಂಬದವರೊಂದಿಗೆ ಮಾತನಾಡಿದ್ದರು. ಬಳಿಕ ಮಲಗಿದ್ದಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.
ದೇಶ ಸೇವೆ ಸಲ್ಲಿಸುತ್ತಿದ್ದ ಯೋಧನ ವಿಷಯ ತಿಳಿದು ಗ್ರಾಮದಲ್ಲಿ ಸೂತಕದ ಛಾಯೆ ಮೂಡಿಸಿತ್ತು. ಕುಟುಂಬದಲ್ಲಿ ಮೌನ ನೆಲೆಸಿತ್ತು.
ಮೃತ ಯೋಧನ ಪಾರ್ಥೀವ ಶರೀರವನ್ನು ಸ್ವಗ್ರಾಮಕ್ಕೆ ತಂದು ಸಾರ್ವಜನಿಕ ದರ್ಶನಕ್ಕಿಡಲಾಗಿತ್ತು. ಬಳಿಕ ಮೂರು ಸುತ್ತು ಕುಶಾಲು ತೋಪು ಹಾರಿಸಿ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ವೃತ್ತ ನಿರೀಕ್ಷಕ ಕೆ.ಪಿ.ಸತ್ಯನಾರಾಯಣ್, ಮಂಚೇನಹಳ್ಳಿ ಠಾಣೆ ಪಿಎಸ್ಐ ಮೂರ್ತಿ, ಗ್ರಾ.ಪಂ ಅಧಿಕಾರಿ, ಯೋಧರು, ಗ್ರಾಮಸ್ಥರು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದರು. ಯೋಧ ಗಂಗಾಧರಪ್ಪ ಅಂತ್ಯಕ್ರಿಯೆ ವೇಳೆ ಜಿಲ್ಲಾಡಳಿತದಿಂದ ಯೋಧನಿಗೆ ಸಿಗಬೇಕಾದ ಗೌರವ ನೀಡದಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಯಿತು.