ಡಿ.15 ರಂದು ಕೃಷಿಕ ಸಮಾಜದ ಚುನಾವಣೆ

26 LNG 02
ನಾಗರತ್ನಾ ಎಚ್.ಹುಲಕೋಟೆ
Published on

ಲಿಂಗಸುಗೂರು: ಉಚ್ಛ ನ್ಯಾಯಾಲಯದ ಆದೇಶದನ್ವಯ ಡಿ.15 ರಂದು ತಾಲೂಕು ಕೃಷಿಕ ಸಮಾಜದ ಚುನಾವಣೆ ನಿಗದಿಪಡಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ, ಚುನಾವಣಾಧಿಕಾರಿ ನಾಗರತ್ನಾ ಎಚ್.ಹುಲಕೋಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ 5 ವರ್ಷಗಳ ಅವಧಿಗೆ ಏರ್ಪಡಿಸುವ ತಾಲೂಕು ಮತ್ತು ಜಿಲ್ಲಾ ಕೃಷಿಕ ಸಮಾಜಗಳ ಚುನಾವಣೆ ನಡೆಯಲಿದ್ದು, ತಾಲೂಕಿನ ಎಲ್ಲ ಸದಸ್ಯರ ಪಟ್ಟಿಯನ್ನು ಕೃಷಿ ಇಲಾಖೆ ಮತ್ತು ಆಯಾ ರೈತ ಸಂಪರ್ಕ ಕೇಂದ್ರಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.

ಚುನಾವಣೆ ನಾಮಪತ್ರವನ್ನು ಅರ್ಜಿ ಮೂಲಕ ರೂ.250 ಠೇವಣಿ ಪಾವತಿಸಿ ರಶೀದಿ, ಪಹಣಿ ಪ್ರತಿಯೊಂದಿಗೆ ಸಲ್ಲಿಸಬೇಕು. ಚುನಾವಣೆ ಪ್ರಕ್ರಿಯೆ ನ.30 ರಿಂದ ಡಿ.6 ರವರೆಗೆ ನಡೆಯಲಿದೆ. ಸದರಿ ಅವಧಿಯ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಸಲ್ಲಿಸುವುದು, ಡಿ.7 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರಗಳ ಪರಿಶೀಲನೆ, ತಿರಸ್ಕೃತಗೊಂಡ ನಾಮಪತ್ರಗಳನ್ನು ಸಂಜೆ 5 ಗಂಟೆಗೆ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು.

ಡಿ.9 ರಂದು ನಾಮಪತ್ರ ವಾಪಸ್ ಪಡೆಯುವುದು ಮತ್ತು ಅದೇ ದಿನ ಅಂತಿಮ ಉಮೇದುವಾರರ ಪಟ್ಟಿ ಪ್ರಕಟಿಸಲಾಗುವುದು. ತಾಲೂಕಿನಿಂದ 15 ಕಾರ್ಯಕಾರಿ ಸಮಿತಿ ಸದಸ್ಯರ ಉಮೇದುವಾರಿಕೆಗೆ ಡಿ.15 ರಂದು ಚುನಾವಣೆ ನಡೆಯಲಿದೆ. ಮಾಹಿತಿಗೆ ಕೃಷಿ ನಿರ್ದೇಶಕರನ್ನು ಸಂಪರ್ಕಿಸಲು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net