

ಮಡಿಕೇರಿ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಿ ಡಿ.೧೫ಕ್ಕೆ ೧೪ ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಡಿ.೧೫ ರಂದು ಕೊಡಗು, ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ಅರೆಭಾಷೆ ದಿನಾಚರಣೆ ಕಾರ್ಯಕ್ರಮಗಳು ಜರುಗಲಿವೆ ಎಂದು ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕುಶಾಲನಗರ ಪಟ್ಟಣ ಮತ್ತು ಐಗೂರು ಗ್ರಾಮ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ಹಾಗೂ ಬೆಳ್ತಂಗಡಿ, ಹಾಗೆಯೇ ಮೈಸೂರಿನ ಕೊಡಗು ಗೌಡ ಸಮಾಜದಲ್ಲಿ ಅರೆಭಾಷೆ ದಿನಾಚರಣೆ ನಡೆಯಲಿದೆ. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಔನ್ನತ್ಯಕ್ಕೆ ಕೊಂಡೊಯ್ಯುವಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಮುಖವಾಗಿ ಅರೆಭಾಷೆಯಲ್ಲಿ ಪುಸ್ತಕ ಪ್ರಕಟಣೆ, ಸಾಹಿತ್ಯ ಮತ್ತು ಸಂಸ್ಕೃತಿ ಕಾರ್ಯಕ್ರಮ ಹಾಗೂ ಅರೆಭಾಷೆ ಬರವಣಿಗೆಗೆ ಹೆಚ್ಚು ಒತ್ತು ನೀಡುವುದು. ಜತೆಗೆ ಸಂಶೋಧನೆಗೆ ಗಮನಹರಿಸುವಲ್ಲಿ ಅಕಾಡೆಮಿ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿದ್ದಾರೆ.
ಡಿ.೧೫ ರಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸುಳ್ಯದ ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ಅರೆಭಾಷೆ ಹಾಡು, ಮಿಮಿಕ್ರಿ, ಮಾತುಕತೆ, ಅರೆಭಾಷೆ ಪದ್ಯ, ಸಾಂಪ್ರದಾಯಿಕ ಉಡುಗೆ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಕೊಡಗು ಜಿಲ್ಲೆಯ ಕುಶಾಲನಗರ ಗೌಡ ಸಮಾಜ ಹಾಗೂ ಐಗೂರು ಗ್ರಾಮದಲ್ಲಿ ಅರೆಭಾಷೆ ಗೌಡ ಸಮಾಜದಲ್ಲಿ ಅರೆಭಾಷೆ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಮೈಸೂರಿನ ವಿಜಯನಗರದ ಕೊಡಗು ಗೌಡ ಸಮಾಜದಲ್ಲಿ ಹಾಗೂ ಬೆಳ್ತಂಗಡಿಯಲ್ಲಿ ಅರೆಭಾಷೆ ಅಭಿಮಾನ ಬಳಗದಿಂದ ಅರೆಭಾಷೆ ದಿನಾಚರಣೆ ನಡೆಯುತ್ತಿರುವುದು ವಿಶೇಷವಾಗಿದೆ ಎಂದು ಸದಾನಂದ ಮಾವಜಿ ತಿಳಿಸಿದ್ದಾರೆ.
ಡಿ.೧೫ ರಂದು ಸುಳ್ಯದಲ್ಲಿ ಅರೆಭಾಷೆ ದಿನಾಚರಣೆ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸುಳ್ಯ ಗೌಡರ ಯುವ ಸೇವಾ ಸಂಘ, ಮಹಿಳಾ ಘಟಕ, ತರುಣ ಘಟಕ, ನಗರ ಸಮಿತಿ ಮತ್ತು ನಗರ ಮಹಿಳಾ ಸಮಿತಿ ಇವರ ಸಹಯೋಗದಲ್ಲಿ ಅರೆಭಾಷೆ ದಿನಾಚರಣೆಯು ಡಿ.೧೫ ರಂದು ಬೆಳಗ್ಗೆ ೯.೩೦ ಗಂಟೆಗೆ ಸುಳ್ಯದ ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಹಿರಿಯ ಎಂಜಿನಿಯರ್ ಡಿ.ಎಂ.ಸುಮಿತ್ರ, ಸಾಹಿತಿ ಶೈಲಜಾ ದಿನೇಶ್, ಗೌಡರ ಯುವ ಸೇವಾ ಸಂಘದ ಪೂರ್ವಾಧ್ಯಕ್ಷ ಕೆ.ಸಿ.ಸದಾನಂದ ಕುರುಂಜಿ, ಮೋಹನ್ ರಾಮ್ ಸುಳ್ಳಿ, ನಿವೃತ್ತ ಅರಣ್ಯ ಪಾಲಕರಾದ ಅಮೈ ಸುಂದರ ಗೌಡ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.