ಡಿ.೧೩ ರಂದು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ

APRU RAVINDRA
Published on

ಮಡಿಕೇರಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ವಿವಿಧ ನಿಗಮಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಡಿ.೧೩ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕೊಡಗು ಜಿಲ್ಲಾ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದಿಂದ ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದಾಗಿ ಮೋರ್ಚಾದ ಜಿಲ್ಲಾಧ್ಯಕ್ಷ ಅಪ್ರು ರವೀಂದ್ರ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ವಿವಿಧ ನಿಗಮಗಳಿಗೆ ಸೂಕ್ತ ಅನುದಾನ ಬಿಡುಗಡೆಯಾಗುತ್ತಿಲ್ಲ. ಬಜೆಟ್‌ನಲ್ಲಿ ಘೋಷಿಸುವ ಮೊತ್ತಕ್ಕೂ, ವಾಸ್ತವವಾಗಿ ಬಿಡುಗಡೆ ಮಾಡುವ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇದರಿಂದ ಹಿಂದುಳಿದ, ಅತೀ ಹಿಂದುಳಿದ, ಅಲೆಮಾರಿ ಸಮುದಾಯಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ಇತರ ಸಮುದಾಯಗಳು ಸಂಕಷ್ಟಕ್ಕೆ ಸಿಲುಕಿವೆ.

ಈ ಹಿಂದಿನ ಸರ್ಕಾರದಲ್ಲಿ ಸ್ವ-ಉದ್ಯೋಗ, ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ಅರಿವು ಯೋಜನೆ ಹಾಗೂ ಸಣ್ಣ ಹಿಡುವಳಿದಾರ ರೈತರಿಗಾಗಿ ಗಂಗಾ ಕಲ್ಯಾಣ ಯೋಜನೆಯಡಿ ಮಂಜೂರು ಮಾಡಲಾಗುತ್ತಿದ್ದ ಉಚಿತ ಬೋರ್‌ವೆಲ್ ಸೌಲಭ್ಯ ಬಹುತೇಕ ಸ್ಥಗಿತಗೊಂಡಿದೆ. ಪಂಚಭಾಗ್ಯ ಯೋಜನೆಯ ಅನುಷ್ಠಾನಕ್ಕಾಗಿ ಹಿಂದುಳಿದ ಸಮುದಾಯಗಳ ಕಲ್ಯಾಣ ಕಾರ್ಯಕ್ಕೆ ವಿನಿಯೋಗವಾಗಬೇಕಿದ್ದ ಹಣವೆಲ್ಲವೂ ವರ್ಗಾವಣೆಯಾಗುತ್ತಿದೆ.

ರಾಜಕೀಯ ಸ್ವಾರ್ಥಕ್ಕಾಗಿ ಅಹಿಂದ ಮಂತ್ರ ಪಠಿಸುವ ಹಾಗೂ ಹಿಂದುಳಿದ ಸಮುದಾಯಗಳನ್ನು ಬಳಸಿಕೊಳ್ಳುವ ಸಿಎಂ ಸಿದ್ಧರಾಮಯ್ಯನವರು ಹಿಂದುಳಿದ ಹಾಗೂ ಅತೀ ಹಿಂದುಳಿದ ಸಮುದಾಯಗಳ ಕಲ್ಯಾಣ ಕಾರ್ಯಕ್ಕೆ ಕಲ್ಲು ಹಾಕಿದ್ದಾರೆ ಎಂದು ಅಪ್ರು ರವೀಂದ್ರ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net