ಆ.೧೦ಕ್ಕೆ ಬಿಟ್ಟಂಗಾಲದಲ್ಲಿ ಕೆಸರುಗದ್ದೆ ಕ್ರೀಡಾಕೂಟ

kesarugadde
Published on

ಮಡಿಕೇರಿ: ಜಬ್ಬೂಮಿ ಸಂಘಟನೆ, ರೂಟ್ಸ್ ಆಫ್ ಕೊಡಗು ಹಾಗೂ ವಿವಿಧ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಕೊಡವ ಸಮುದಾಯಗಳ ನಡುವೆ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಕೆಸರು ಗದ್ದೆ ಕ್ರೀಡಾಕೂಟವನ್ನು ಆ.೧೦ ರಂದು ಶನಿವಾರ ಬಿಟ್ಟಂಗಾಲ ಗ್ರಾಮದ ನಾಯಡ ಕುಟುಂಬದ ಮುರುವಂಡ ಮಿಥುನ್ ಅಣ್ಣಯ್ಯ ಪೊನ್ನಕಚ್ಚಿರ ಪುನೀತ್ ಅವರ ಮೇಲುಸ್ತುವಾರಿಯ ಗದ್ದೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಳಾಗಿದ್ದು, ಕೊಡಗಿನ ಕೃಷಿಯೊಂದಿಗೆ ಸಂಸ್ಕೃತಿ ಮಿಡಿತ ಹೊಂದಿದೆ. ಕೃಷಿ ಪರಂಪರೆಯ ಬಗ್ಗೆ ಅಭಿಮಾನ ಮೂಡಿಸಿ, ಉಳಿಸಿಕೊಳ್ಳಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಮುಖರು ತಿಳಿಸಿದರು.


ಮುಕ್ತ ಟಗ್ ಆಫ್ ವಾರ್ ಪುರುಷರು ಮತ್ತು ಮಹಿಳೆಯರಿಗಾಗಿ ಗರಿಷ್ಠ ೧೨ ತಂಡಗಳಿಗೆ ಸೀಮಿತವಾಗಿದೆ. ಟಗ್ ಆಫ್ ವಾರ್(ಶಾಲಾ ಮಕ್ಕಳು) ಕೇವಲ ೧೦ ಶಾಲೆಗಳಿಗೆ(ವಯಸ್ಸಿನ ನಿರ್ಬಂಧವಿಲ್ಲ). ಕೆಸರುಗದ್ದೆ ಓಟ ಸ್ಪರ್ಧೆ ಪುರುಷರು ಮತ್ತು ಮಹಿಳೆಯರಿಗೆ ೬ ವರ್ಷಗಳ ಕೆಳಗೆ, ೬-೧೨ ವರ್ಷ, ೧೨-೧೬ ವರ್ಷ, ೧೬ ವರ್ಷಕ್ಕಿಂತ ಮೇಲ್ಪಟ್ಟವರ ವಿಭಾಗದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.


ಕೆಸರುಗದ್ದೆ ನಡಿಗೆ ೬೦ ವರ್ಷ ಮೇಲ್ಪಟ್ಟ ಪುರುಷರಿಗೆ ಮಾತ್ರ ಭಾಗವಹಿಸಬಹುದು. ಕೈಪುಳಿ ಹಾಗೂ ಕೈಕಣೆ ನಡಿಗೆ ೩೦ ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಾತ್ರ ಆಯೋಜಿಸಲಾಗಿದೆ. ವಿಶೇಷವಾಗಿ ಪ್ರಗತಿ ಶಾಲಾ ಮಕ್ಕಳಿಂದ ಪ್ರಾಯೋಗಿಕ ಗದ್ದೆ ನಾಟಿ ಮಾಡುವ ಕಾರ್ಯ ನಡೆಯಲಿದೆ. ನಂತರ ಪೆರುವನಾಡ್‌ಗೆ ಸಂಬಂಧಪಟ್ಟ ಸತತವಾಗಿ ಭತ್ತದ ಕೃಷಿ ಮಾಡುತ್ತಿರುವ ೩ ರೈತರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಟಗ್ ಆಫ್ ವಾರ್ ಕ್ರೀಡೆಯಲ್ಲಿ ಭಾಗವಹಿಸುವ ಮೊದಲ ೧೨ ತಂಡಗಳಿಗೆ ಮಾತ್ರ ಅವಕಾಶ ಕಲ್ಪಸಲಾಗಿದೆ. ಆದ್ದರಿಂದ ಜು.೫ ರ ಒಳಗೆ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಉಳುವಂಗಡ ಲೋಹಿತ್ ಭೀಮಯ್ಯ ಮೊ.೯೪೮೦೭೩೧೮೭೬ ಹಾಗೂ ಚೇಂದಂಡ ಶಮಿ ಬೆಳ್ಯಪ್ಪ ೯೯೪೫೯೯೯೩೬೬ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net