

ಬಾಗಲಕೋಟೆ : ವಕೀಲರಾಗಿ, ನಾಗರಿಕ ಸರಬರಾಜು ಇಲಾಖೆ, ಸಾಮಾಜಿಕ ಚಟುವಟಿಕೆಯಲ್ಲಿ ಸೇವೆ ಸಲ್ಲಿಸಿದ ಬಾಗಲಕೋಟೆಯ ದಿ. ಗೋಪಾಲರಾವ ಎಚ್.ಛಬ್ಬಿ ಅವರ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಆ.6 ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.
ಸಂಘದ ಮಿನಿ ಸಭಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿವಿವಿ ಸಂಘದ ಎಸ್.ಸಿ. ನಂದಿಮಠ ಕಾನೂನು ಮಹಾವಿದ್ಯಾಲಯ, ಬಾಗಲಕೋಟೆ ಜಿಲ್ಲಾ ವಕೀಲರ ಸಂಘ ಮತ್ತು ಜಿ.ಎಚ್. ಛಬ್ಬಿ ಅಸೋಸಿಯೇಟ್ಸ್ ಸಹಯೋಗದಲ್ಲಿ ಬಿವಿವಿ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ಸಭಾಭವನದಲ್ಲಿ ಬೆಳಗ್ಗೆ 9:30 ಗಂಟೆಗೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಉದ್ಘಾಟಿಸುವರು. ಶಾಸಕ ಡಾ.ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸುವರು. ರಾಜ್ಯ ಆಡಳಿತ ನ್ಯಾಯಮಂಡಳಿಯ ಅಧ್ಯಕ್ಷೃ, ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ, ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷೃ ಡಿ.ಬಿ.ಪೂಜಾರ, ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಂ.ಪಿ. ಚಂದ್ರಿಕಾ, ಶ್ರೀನಿವಾಸ ಛಬ್ಬಿ ಉಪಸ್ಥಿತರಿರುವರು. ನಂತರ ದಿ.ಜಿ.ಎಚ್.ಛಬ್ಬಿ ಅವರೊಂದಿಗೆ ಒಡನಾಟ ಮತ್ತು ಸೈಬರ್ ಕಾನೂನು ಮತ್ತು ವಿದ್ಯುನ್ಮಾನ ಸಾಕ್ಷಗಳ ಮಾನ್ಯತೆ ಕುರಿತು ಗೋಷ್ಠಿಗಳು ನಡೆಯಲಿವೆ. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಶ್ರೀನಿವಾಸ ಛಬ್ಬಿ ಉಪಸ್ಥಿತರಿದ್ದರು.