

ಮೈಸೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶ್ರೀ ಕೊಟ್ಟೂರು ಬಸವೇಶ್ವರ ಸೇವಾ ಟ್ರಸ್ಟ್ ಹಾಗೂ ಸ್ವರ್ಣಭೂಮಿ ಫೌಂಡೇಷನ್ ವತಿಯಿಂದ ಡಿ.31 ರಂದು ಬೆಳಗ್ಗೆ 10 ಗಂಟೆಗೆ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಕುವೆಂಪು ಹುಟ್ಟುಹಬ್ಬದ ಅಂಗವಾಗಿ ವಿಶ್ವಮಾನವ ದಿನಾಚರಣೆ, ವಿಶೇಷ ಉಪನ್ಯಾಸ, ಪುಸ್ತಕ ಲೋಕಾರ್ಪಣೆ, ಕವಿಗೋಷ್ಠಿ, ಶತಶೃಂಗ ಸಾಹಿತ್ಯ ಪ್ರಶಸ್ತಿ ಹಾಗೂ ಕುವೆಂಪು ವಿಶ್ವಮಾನವ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ಸಮಾರಂಭ ಉದ್ಘಾಟಿಸಲಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸುವರು. ಸಾಹಿತಿ ಹಾಗೂ ಸಂಘಟಕ ಟಿ.ಸತೀಶ್ ಜವರೇಗೌಡ ಅವರು ‘ಕುವೆಂಪು ವಿಚಾರಧಾರೆ ಮತ್ತು ಯುವಜನರು’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಕಾರ್ಯಕ್ರಮ ಸಂಯೋಜಕ ಬಿ.ಶಿವಕುಮಾರ್ ಕೋಲಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಂಪ ಪ್ರಶಸ್ತಿ ಪುರಸ್ಕೃತ ಖ್ಯಾತ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅವರು ಯುವ ಲೇಖಕ ಲಿಖಿತ್ ಹೊನ್ನಾಪುರ ವಿರಚಿತ ‘ಭಾವಭಂಗ ಕಲ್ಪನಾತರಂಗ’ ಪುಸ್ತಕ ಲೋಕಾರ್ಪಣೆ ಮಾಡಿ ಪ್ರಶಸ್ತಿ ಪ್ರದಾನ ಮಾಡುವರು. ಕವಯತ್ರಿ ಎನ್. ಶಾರದಮ್ಮ, ಕಾಸರಗೋಡಿನ ಕನ್ನಡ ಭವನದ ಅಧ್ಯಕ್ಷ ವಾಮನ್ ರಾವ್ ಬೇಕಲ್, ಸಮಸಜ ಸೇವಕ ಕೃಷ್ಣೇಗೌಡ, ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಸುರೇಂದ್ರ ಸಮಗಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ‘ಕುವೆಂಪು ವಿಶ್ವಮಾನವ ಕನ್ನಡ ರತ್ನ ಪ್ರಶಸ್ತಿ’ಯನ್ನು ‘ವಿಜಯವಾಣಿ’ ದಿನಪತ್ರಿಕೆಯ ಮುಖ್ಯ ವರದಿಗಾರ ಆರ್.ಕೃಷ್ಣ, ಅಂಕಣಕಾರ ಮಿರ್ಲೆ ಚಂದ್ರಶೇಖರ್, ಕವಿ ಗಣೇಶ್ ನಿಲುವಾಗಿಲು, ಪತ್ರಕರ್ತೆ ಮ.ನಾ.ಲತಾ ಮೋಹನ್ ಸೇರಿದಂತೆ 12 ಜನರಿಗೆ ಪ್ರದಾನ ಮಾಡಲಾಗುತ್ತದೆ. ‘ಶತಶೃಂಗ ಸಾಹಿತ್ಯ ಪ್ರಶಸ್ತಿ’ಯನ್ನು ಸಾಹಿತಿಗಳಾದ ಟಿ.ಸತೀಶ್ ಜವರೇಗೌಡ ಹಾಗೂ ಟಿ.ತ್ಯಾಗರಾಜು ಅವರಿಗೆ ಪ್ರದಾನ ಮಾಡಲಾಗುತ್ತದೆ. ಬಳಿಕ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ 34 ಕವಿಗಳು ಕವನ ವಾಚಿಸಲಿದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಶ್ರೀ ದುರ್ಗಾದೇವಿ ಸಾಂಸ್ಕೃತಿಕ ಡೊಳ್ಳಿನ ಸಂಘದ ಕಲಾವಿದರು ಜನಪದ ನೃತ್ಯ ಪ್ರದರ್ಶನ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.