30 ರಂದು ಗಣಪತಿ ಆಶ್ರಮದಲ್ಲಿ ‘ಸಂಗೀತ ಸಂಜೆ’

Music _1
Published on

ನಂ. 1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ಸುದ್ದಿವಾಹಿನಿ ವತಿಯಿಂದ ಜು. 30 ರಂದು ‘ಸಂಗೀತ ಸಂಜೆ’ ಕಾರ್ಯಕ್ರಮ ಆಯೋಜಿಸಲಾಗಿದ್ದು, ‘ಕಂಚಿನ ಕಂಠದ ಕೋಗಿಲೆ’ ಖ್ಯಾತಿಯ ಪಂಡಿತ್ ಜಯತೀರ್ಥ್ ಮೇವುಂಡಿ ಸೇರಿದಂತೆ ಖ್ಯಾತ ಕಲಾವಿದರು ಸಾಂಸ್ಕೃತಿಕ ನಗರಿಯಲ್ಲಿ ಸಂಗೀತದ ಕಂಪು ಚೆಲ್ಲಲಿದ್ದಾರೆ.

ಭಾರತ್ ಇಂಟರ್‌ನ್ಯಾಷನಲ್ ಟ್ರಾವೆಲ್ಸ್ ಮುಖ್ಯ ಪ್ರಾಯೋಜಕತ್ವ, ಅನಿಫ್ರೇಮ್ಸ್ ಮತ್ತು ಹೋಟೆಲ್ ರಿಯೋ ಮೆರಿಡಿಯನ್ ಸಹ ಪ್ರಾಯೋಜಕತ್ವದಲ್ಲಿ ಊಟಿ ರಸ್ತೆಯ ದತ್ತನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ನಾದ ಮಂಟಪದಲ್ಲಿ ಅಂದು ಸಂಜೆ 5 ರಿಂದ ರಾತ್ರಿ 9 ಗಂಟೆಯವರೆಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ‘ಸಿತಾರ್ ವಾದನ, ಹಿಂದುಸ್ತಾನಿ ಗಾಯನ, ಕರ್ನಾಟಕ ಕೊಳಲು ಜುಗಲ್‌ಬಂದಿ’ ಮೂಲಕ ಕಲಾವಿದರು ಸಂಗೀತ ಸುಧೆ ಹರಿಸಲಿದ್ದಾರೆ.

ಹುಬ್ಬಳ್ಳಿಯ ಪಂಡಿತ್ ಜಯತೀರ್ಥ್ ಮೇವುಂಡಿ ಅವರು ‘ಹಿಂದುಸ್ತಾನಿ ಸಂಗೀತ ಕಛೇರಿ’ ನೀಡಲಿದ್ದು, ಚೆನ್ನೈನ ವಿದ್ವಾನ್ ಶಶಾಂಕ್ ಸುಬ್ರಹ್ಮಣ್ಯ ‘ಕರ್ನಾಟಕ ಕೊಳಲು’, ಮಂಗಳೂರಿನ ವಿದ್ವಾನ್ ಅಂಕುಶ್ ನಾಯಕ್ ‘ಸಿತಾರ್’ ವಾದನ ನಡೆಸಿಕೊಡಲಿದ್ದಾರೆ. ಪಕ್ಕವಾದ್ಯದಲ್ಲಿ ಚೆನ್ನೈನ ವಿದ್ವಾನ್ ಪತ್ರಿ ಸತೀಶ್‌ಕುಮಾರ್ (ಮೃದಂಗ), ಬೆಂಗಳೂರಿನ ಪಂಡಿತ್ ರಾಜೇಂದ್ರ ನಾಕೋಡ್(ತಬಲ), ಮುಂಬೈನ ಪಂಡಿತ್ ಯಶ್ವಂತ್(ತಬಲ) ಹಾಗೂ ಮಂಗಳೂರಿನ ವಿದ್ವಾನ್ ನರೇಂದ್ರ ಎಲ್.ನಾಯಕ್(ಹಾರ್ಮೋನಿಯಂ) ಸಹಕಾರ ನೀಡಲಿದ್ದಾರೆ.

ಕಂಚಿನ ಕಂಠದ ಗಾಯಕ

ಪಂ. ಜಯತೀರ್ಥ್ ಮೇವುಂಡಿ ಅವರು ಕಿರಾಣಾ ಘರಾಣಾ ಶೈಲಿಯ ಪ್ರಖ್ಯಾತ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಮೇರು ಗಾಯಕರ ಸಾಲಿಗೆ ಸೇರುತ್ತಾರೆ. 1972ರಲ್ಲಿ ಹುಬ್ಬಳ್ಳಿಯಲ್ಲಿ ಜನಿಸಿದ ಅವರು, ಸಂಗೀತ ಪರಿಸರದಲ್ಲೇ ಬೆಳೆದರು. ಸಣ್ಣ ವಯಸ್ಸಿನಲ್ಲೇ ಪುರಂದರದಾಸರ ಕೃತಿಗಳನ್ನು ಹಾಡುತ್ತಿದ್ದ ಅವರಿಗೆ ತಾಯಿ ಸುಧಾಬಾಯಿ ಪ್ರೋತ್ಸಾಹ ನೀಡಿ ಸಂಗೀತ ಲೋಕದ ಬಹುದೊಡ್ಡ ವೃಕ್ಷವಾಗಿ ಬೆಳೆಯಲು ಕಾರಣರಾದರು. ಮೊದಲಿಗೆ ಗ್ವಾಲಿಯರ್ ಘರಾಣಾದ ಸಂಗೀತ ವಿದ್ವಾಂಸರಾದ ಸಂಗೀತ ರತ್ನ ಪಂ.ಅರ್ಜುನಸಾ ನಾಕೋಡರಲ್ಲಿ ಸಂಗೀತ ಕಲಿತರು. ಬಳಿಕ ಭಾರತ ರತ್ನ ಪಂ.ಭೀಮಸೇನ ಜೋಶಿ ಅವರ ಶಿಷ್ಯರಾದ ಶ್ರೀಪತಿ ಪಾಡಿಗಾರ ಅವರಿಂದ ಕಿರಾಣಾ ಘರಾಣಾ ಸಂಗೀತ ಅಭ್ಯಾಸ ಮಾಡಿದರು. ಪ್ರತಿಷ್ಠಿತ ವೇದಿಕೆಗಳಲ್ಲಿ ಗಾಯನ ಕಾರ್ಯಕ್ರಮ ನೀಡಿರುವ ಜಯತೀರ್ಥ್ ಮೇವುಂಡಿ ಅವರು, ಆಕಾಶವಾಣಿ ಮತ್ತು ದೂರದರ್ಶನದ ‘ಎ’ ಗ್ರೇಡ್ ಕಲಾವಿದರಾಗಿದ್ದಾರೆ. ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಫ್ರೆಂಚ್ ನೈಟ್‌ಹುಡ್ ಪ್ರಶಸ್ತಿ ಪುರಸ್ಕೃತ

ಶಶಾಂಕ್ ಸುಬ್ರಹ್ಮಣ್ಯ ಚೆನ್ನೈನವರಾಗಿದ್ದು, ಗ್ರ್ಯಾಮಿ-ನಾಮನಿರ್ದೇಶಿತರಾಗಿದ್ದಾರೆ. ಸಂಗೀತದಲ್ಲಿ ಪರಿಣತಿ ಹೊಂದಿರುವ ಕರ್ನಾಟಕ ಶಾಸ್ತ್ರೀಯ ಸಂಗೀತ ಶೈಲಿಯ ಹೆಸರಾಂತ ಕೊಳಲು ವಾದಕರಾಗಿದ್ದಾರೆ. ಫ್ರಾನ್ಸ್ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ‘ಫ್ರೆಂಚ್ ನೈಟ್‌ಹುಡ್ ಪ್ರಶಸ್ತಿ 2022’ಕ್ಕೆ ಪಾತ್ರರಾಗಿದ್ದಾರೆ. ಆರನೇ ವಯಸ್ಸಿನಲ್ಲೇ ಕೊಳಲು ವಾದನ ಪ್ರದರ್ಶನ ಆರಂಭಿಸಿದ ಅವರು, 39 ವರ್ಷಗಳಿಂದ ನಿರಂತರವಾಗಿ ಸಂಗೀತ ಪ್ರದರ್ಶನ ನೀಡುತ್ತಿದ್ದಾರೆ. ದೇಶ, ವಿದೇಶದ ಅನೇಕ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಜಾನ್ ಮೆಕ್‌ಲಾಲಿನ್, ಪ್ಯಾಕೊ ಡಿ ಲೂಸಿಯಾ, ಜಾಕಿರ್ ಹುಸೇನ್, ಸುಲ್ತಾನ್ ಖಾನ್, ಶಾಹಿದ್ ಪರ್ವೇಜ್ ಸೇರಿದಂತೆ ಪ್ರಪಂಚದ ಶ್ರೇಷ್ಠ ಸಂಗೀತಗಾರರ ಜತೆ ವೇದಿಕೆ ಹಂಚಿಕೊಂಡಿದ್ದಾರೆ.

ಖ್ಯಾತ ಸಿತಾರ್ ವಾದಕ

ಮಂಗಳೂರಿನ ಅಂಕುಶ್ ನಾಯಕ್ ಖ್ಯಾತ ಸಿತಾರ್ ವಾದಕರಾಗಿದ್ದಾರೆ. ಶಿಕ್ಷಣ ತಜ್ಞ ಪ್ರೊ.ನರೇಂದ್ರ ಎಲ್.ನಾಯಕ್ ಮತ್ತು ಡಾ.ಉಷಾಪ್ರಭಾ ಎನ್.ನಾಯಕ್ ದಂಪತಿಯ ಪುತ್ರ. ತಮ್ಮ ಒಂಬತ್ತನೇ ವಯಸ್ಸಿನಲ್ಲಿ ಧಾರವಾಡ ಘರಾಣೆಯ ಸಿತಾರ್ ವಾದಕ ಉಸ್ತಾದ್ ರಫೀಕ್ ಖಾನ್ ಅವರಿಂದ ಸಿತಾರ್ ಕಲಿಯಲು ಪ್ರಾರಂಭಿಸಿದರು. ಜತೆಗೆ, ಘಟಂ ಮಾಂತ್ರಿಕ ವಿದ್ವಾನ್ ತಿರುಚಿ ಕೆ.ಆರ್. ಕುಮಾರ್ ಅವರಿಂದ ಸಂಗೀತ ಕಲಿತಿದ್ದಾರೆ. ಪ್ರಸಿದ್ಧ ಸರೋದ್ ಕಲಾವಿದ ಪಂ.ಬುದ್ಧದೇವ್ ದಾಸ್ ಗುಪ್ತಾ ಅವರಲ್ಲೂ ಸಂಗೀತ ಅಭ್ಯಾಸ ಮಾಡಿದ್ದಾರೆ. 2009ರಲ್ಲಿ ನಡೆದ ರಾಷ್ಟ್ರ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿರುವ ಅವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ.

ಕಲೆ ಪೋಷಣೆಗೂ ಸೈ ಎಂದ ವಿವಿ

ಜನಪರ ಕಾಳಜಿಯಲ್ಲಿ ಸದಾ ಮುಂದಿರುವ ‘ವಿಜಯವಾಣಿ’ ಮತ್ತು ‘ದಿಗ್ವಿಜಯ’, ಇದೀಗ ಸಂಗೀತ ರಸಿಕರ ಮನ ತಣಿಸಲು, ಕಲಾವಿದರನ್ನು ಪೋಷಿಸಲು, ಸಂಗೀತ ಪರಂಪರೆಯನ್ನು ಉಳಿಸಿ ಬೆಳೆಸಲು ಸಂಗೀತ ಕಾರ್ಯಕ್ರಮ ಆಯೋಜಿಸುತ್ತಿದೆ. ಈ ಮೂಲಕ ಪತ್ರಿಕೋದ್ಯಮದಲ್ಲಿ ಹೊಸಭಾಷ್ಯ ಬರೆಯಲು ಮುಂದಾಗಿದೆ. ಅಭಿವೃದ್ಧಿ ವರದಿಗಳು, ನಾನಾ ಸುದ್ದಿಗಳು, ವಿಶೇಷ ಲೇಖನಗಳ ಮೂಲಕ ಸಮಾಜದ ಅಭಿವೃದ್ಧಿಯ ಬಗ್ಗೆ ಜನಪ್ರತಿನಿಧಿಗಳ ಕಣ್ತೆರೆಸಿ, ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದರಲ್ಲಿ ಮುಂದಿರುವ ‘ವಿಜಯವಾಣಿ’, ಕಲಾ ಪೋಷಣೆಗೂ ಸೈ ಎನ್ನುತ್ತಿದೆ.

ಉದ್ಘಾಟನೆ

ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ನಾಗೇಶ್ ವಿ.ಬೆಟ್ಟಕೋಟೆ, ಭಾರತ್ ಇಂಟರ್ ನ್ಯಾಷನಲ್ ಟ್ರಾವೆಲ್ಸ್ ನಿರ್ದೇಶಕ ಮನೀಷ್ ಸಾಲಿಯನ್, ಅನಿಫ್ರೇಮ್ಸ್ ವ್ಯವಸ್ಥಾಪಕ ನಿರ್ದೇಶಕ ಎ.ಕ್ಲೆಮೆಂಟ್ ವೆಸ್ಲಿ, ಹೋಟೆಲ್ ರಿಯೋ ಮೆರಿಡಿಯನ್ ವ್ಯವಸ್ಥಾಪಕ ನಿರ್ದೇಶಕ ಸಿ.ಪ್ರವೀಣ್‌ಕುಮಾರ್ ಭಾಗವಹಿಸಲಿದ್ದಾರೆ.
ಕಲಾಸಕ್ತರು, ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net