29ರಂದು ಕಬಿನಿ ಜಲಾಶಯಕ್ಕೆ ಸಿಎಂ ಬಾಗಿನ

IMG-20240726-WA0039
Published on

ಎಚ್.ಡಿ.ಕೋಟೆ: ರಾಜ್ಯದಲ್ಲಿ ಮೊದಲು ತುಂಬುವ ಜಲಾಶಯಕ್ಕೆ ಹೆಸರುವಾಸಿಯಾದ ಕಬಿನಿ ಜಲಾಶಯಕ್ಕೆ ಜು.29 ರಂದು ಸೋಮವಾರ ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ.


ಈಗಾಗಲೇ ಕಬಿನಿ ಜಲಾಶಯ ಭರ್ತಿಗೆ ಒಂದೂವರೆ ಅಡಿ ಬಾಕಿ ಇದ್ದು, ಜಲಾಶಯದ ಭದ್ರತಾ ದೃಷ್ಟಿಯಿಂದ 25 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಸಿಎಂ ಜಲಾಶಯಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ಕಬಿನಿಯನ್ನು ಸಿಂಗಾರ ಮಾಡಲು ಮುಂದಾಗಿದ್ದಾರೆ. ಜಲಾಶಯದ ಸ್ವಾಗತ ಕಮಾನಿಗೆ, ಕ್ರಸ್ಟ್ ಗೇಟ್‌ನ ಗೋಪುರಕ್ಕೆ, ಅಣೆಕಟ್ಟಿನ ಮೇಲಿನ ರಸ್ತೆಯ ಎರಡು ಬದಿಯ ತಡೆಗೋಡೆಗಳಿಗೆ ಸುಣ್ಣ ಬಣ್ಣ ಬಳಿಯುವ ಕೆಲಸ ಪ್ರಗತಿಯಲ್ಲಿದ್ದು, ಜಲಾಶಯ ಮದುವಣಗಿತ್ತಿಯಂತೆ ಶೃಂಗಾರಗೊಂಡು ಪ್ರಜ್ವಲಿಸಲಿದೆ.


ಮುಖ್ಯಮಂತ್ರಿಗಳು ಹೆಲಿಕಾಫ್ಟರ್ ಮೂಲಕ ಬರಲಿರುವುದರಿಂದ ಜಲಾಶಯದ ಅತಿಥಿಗೃಹದ ಮುಂಭಾಗ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಶಾಮಿಯಾನ ಹಾಕುವ ಕೆಲಸ ಬರದಿಂದ ಸಾಗಿದೆ.


ತಮಿಳುನಾಡಿಗೆ 35 ಟಿಎಂಸಿ ನೀರು?: ಕೇರಳದ ವೈನಾಡು ಜಿಲ್ಲೆಯಲ್ಲಿ ಕಳೆದ ಹಲವಾರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಕಬಿನಿ ಜಲಾಶಯಕ್ಕೆ ಹದಿನೈದು ದಿನಗಳಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ಅಷ್ಟೇ ಪ್ರಮಾಣದ ನೀರು ಹರಿಸಲಾಗುತ್ತಿದೆ. ಈಗಾಗಲೇ ಜಲಾಶಯದಿಂದ 35 ಟಿಎಂಸಿ ನೀರು ನದಿ ಮೂಲಕ ತಮಿಳುನಾಡು ರಾಜ್ಯದ ಮೆಟ್ಟೂರು ಜಲಾಶಯಕ್ಕೆ ಹರಿದಿದೆ. ರಾಜ್ಯದಿಂದ ತಮಿಳುನಾಡಿಗೆ ಜುಲೈ ತಿಂಗಳಲ್ಲಿ ಹರಿಸಬೇಕಿದ್ದ 30 ಟಿಎಂಸಿ ನೀರಿಗಿಂತ ಹೆಚ್ಚುವರಿಯಾಗಿ 5 ಟಿಎಂಸಿ ನೀರನ್ನು ಕಬಿನಿ ಜಲಾಶಯ ಒಂದರಲ್ಲೇ ಹರಿಸುವ ಮೂಲಕ ತಮಿಳುನಾಡಿನ ಬೇಡಿಕೆಯನ್ನು ಪೂರೈಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net