26ರಂದು ಗಾನಯೋಗಿ ಪುಟ್ಟರಾಜ-ಪಂಚಾಕ್ಷರಿ ಸಂಗೀತೋತ್ಸವ

swarasankula invitation
Published on

ಮೈಸೂರು: ನಗರದ ಸ್ವರಸಂಕುಲ ಸಂಗೀತ ಸಭಾ ವತಿಯಿಂದ ‘ಗಾನಯೋಗಿ ಪುಟ್ಟರಾಜ-ಪಂಚಾಕ್ಷರಿ ಸಂಗೀತೋತ್ಸವ’ ಕಾರ್ಯಕ್ರಮವನ್ನು ಕುವೆಂಪುನಗರದ ವೀಣೆಶೇಷಣ್ಣ ಭವನದಲ್ಲಿ ಮಾ. 26ರಂದು ಸಂಜೆ 5.30ಕ್ಕೆ ಆಯೋಜಿಸಲಾಗಿದೆ.


ವಿದುಷಿ ಸಂಜನಾ ಕೌಶಿಕ್ ಮತ್ತು ಕೊಲ್ಕೊತ್ತಾದ ಪಂಡಿತ್ ಬ್ರಜೇಶ್ವರ್ ಮುಖರ್ಜಿ ಹಿಂದುಸ್ತಾನಿ ಗಾಯನ ಕಛೇರಿ ನೀಡಲಿದ್ದಾರೆ.
ಸಂಜನಾ ಕೌಶಿಕ್ ಅವರಿಗೆ ಪಂ.ಶ್ರೀರಾಮ್ ಭಟ್ (ಹಾರ್ಮೋನಿಯಂ) ಮತ್ತು ಪಂ.ಭೀಮಾಶಂಕರ್ ಭಿದನೂರು (ತಬಲಾ) ಸಹಕಾರ ನೀಡಲಿದ್ದಾರೆ. ನಂತರದಲ್ಲಿ ಪಂ.ಬ್ರಜೇಶ್ವರ್ ಮುಖರ್ಜಿ ಗಾಯನಕ್ಕೆ ಪಂ. ವೀರಭದ್ರಯ್ಯ ಹಿರೇಮಠ್ (ಹಾರ್ಮೋನಿಯಂ) ಮತ್ತು ಪಂ. ರಮೇಶ್ ಧನ್ನೂರ್ (ತಬಲಾ) ಸಹಕಾರ ನೀಡಲಿದ್ದಾರೆ.

ದೇಶದ ಪ್ರಖ್ಯಾತ ಹಿಂದೂಸ್ತಾನಿ ಗಾಯಕರಲ್ಲೊಬ್ಬರಾದ ಪಂ. ಬ್ರಜೇಶ್ವರ್ ಮುಖರ್ಜಿ ಪದ್ಮಭೂಷಣ, ಪಂ. ಅಜೋಯ್ ಚಕ್ರವರ್ತಿ ಅವರ ಶಿಷ್ಯರು. ಪ್ರಸ್ತುತ ಕೊಲ್ಕೊತ್ತಾದ ಸಂಗೀತ ಸಂಶೋಧನಾ ಅಕಾಡೆಮಿಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪೂನಾದ ಪ್ರಖ್ಯಾತ ಸವಾಯ್ ಗಂಧರ್ವ ಸಂಗೀತೋತ್ಸವ, ಗೋವಾದ ಸಂಗೀತ ನಾಟಕ ಅಕಾಡೆಮಿ, ಅಮೆರಿಕಾದ ನ್ಯೂಯಾರ್ಕ್‌ನ ಬೆಂಗಾಲಿ ಸಮ್ಮೇಳನ ಮುಂತಾದ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಹಾಡಿ ಮನ್ನಣೆ ಪಡೆದಿದ್ದಾರೆ. ಸಂಗೀತ ನಾಟಕ ಅಕಾಡೆಮಿಯಿಂದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ, ಆದಿತ್ಯ ವಿಕ್ರಮ್ ಬಿರ್ಲಾ ಕಲಾ ಪುರಸ್ಕಾರದಂಥ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನದ ಉನ್ನತ ಶ್ರೇಣಿಯ ಗಾಯಕರಾಗಿದ್ದಾರೆ.

ವಿದುಷಿ ಸಂಜನಾ ಕೌಷಿಕ್:
ಮೈಸೂರಿನ ವಿದುಷಿ ಸಂಜನಾ ಕೌಷಿಕ್ ತಮ್ಮ ಪ್ರಾರಂಭಿಕ ಹಿಂದುಸ್ತಾನಿ ಸಂಗೀತ ಗಾಯನ ತರಬೇತಿಯನ್ನು ಜಲಂಧರ್‌ನ ಗೀತಾದತ್ ಬಳಿ ಪಡೆದರು. ನಂತರ ಪಂ. ವೀರಭದ್ರಯ್ಯ ಹಿರೇಮಠ್, ಪಂ. ನಾಗಭೂಷಣ ಹೆಗಡೆ ಮತ್ತು ಪಂ. ಪಂಡಿತ್ ನಿರಂಜನ್ ಅವರಲ್ಲಿ ಪಡೆದಿದ್ದಾರೆ. ಆಕಾಶವಾಣಿಯ ಶ್ರೇಣೀಕೃತ ಕಲಾವಿದರಾದ ಇವರು, ಪ್ರಸ್ತುತ ಪೂನಾದ ಮಹಿಳಾ ವಿಶ್ವವಿದ್ಯಾಲಯದಲ್ಲಿ, ಹಿಂದುಸ್ತಾನಿ ಸಂಗೀತದಲ್ಲಿ ಪಿಎಚ್.ಡಿ ಅಧ್ಯಯನವನ್ನು ಮುಂದುವರಿಸಿದ್ದಾರೆ. ದೇಶದ ಅನೇಕ ಪ್ರಮುಖ ಸಂಗೀತ ವೇದಿಕೆಗಳಲ್ಲಿ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದಾರೆ. ಕಲಾಕಾರ್ ಮತ್ತು ಬಾಲ ಪ್ರತಿಭಾ ರತ್ನ , ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದೆ. ಮಾಹಿತಿಗಾಗಿ ಮೊ.ಸಂ.6364676005 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net