26ರಂದು ಸಿದ್ದರಾಮನಹುಂಡಿಯಿಂದ ಗ್ರಾಮ ಸಹಾಯಕರಿಂದ ಮೈಸೂರಿಗೆ ಪಾದಯಾತ್ರೆ

Published on

ಮೈಸೂರು: ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಸಹಾಯಕರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಫೆ.26ರಂದು ಸಿದ್ದರಾಮನಹುಂಡಿಯಿಂದ ಮೈಸೂರು ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದ ರಾಜ್ಯಾಧ್ಯಕ್ಷ ಎಚ್.ಎನ್.ದೇವರಾಜು ತಿಳಿಸಿದರು.
ಸೇವಾ ಭದ್ರತೆ ಸೇರಿದಂತೆ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಹೋರಾಟ ನಡೆಸಿದ್ದರೂ ಸರ್ಕಾರ ಸ್ಪಂದಿಸಿಲ್ಲ. ಹಾಗಾಗಿ ಮೊದಲ ಹಂತದಲ್ಲಿ ಪಾದಯಾತ್ರೆ ನಡೆಸಿ ಫೆ.28ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗ್ರಾಮ ಸಹಾಯಕರು ಶಿಷ್ಟಾಚಾರ ಕಾರ್ಯ, ಚುನಾವಣೆ ಸಮಯ ಸೇರಿದಂತೆ ಅನೇಕ ಮಹತ್ವದ ಸಮಯದಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಆದರೆ ಯಾವುದೇ ಸೌಲಭ್ಯಗಳನ್ನು ನೀಡದೆ ಮಾಸಿಕ ಕೇವಲ 13 ಸಾವಿರ ರೂ. ಗೌರವಧನ ನೀಡಲಾಗುತ್ತಿದೆ ಎಂದರು.
ರಾಜ್ಯಾದ್ಯಂತ 10,450 ಗ್ರಾಮ ಸಹಾಯಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ಪ್ರತಿಯೊಂದು ಕೆಲಸಗಳಿಗೂ ನಮ್ಮನ್ನು ಬಳಸಿಕೊಳ್ಳುತ್ತಿದ್ದು, 2023ರ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವೇತನ ಹಾಗೂ ಸೇವಾ ಭದ್ರತೆ ನೀಡುವುದಾಗಿ ಕಂದಾಯ ಸಚಿವರು ಆಶ್ವಾಸನೆ ನೀಡಿದ್ದರು. ಆದರೆ ಬಜೆಟ್‌ನಲ್ಲಿ ಈ ವಿಚಾರವೇ ಪ್ರಸ್ತಾಪವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಗ್ರಾಮ ಸಹಾಯಕರಿಗೆ ಪೂರಕ ಬಜೆಟ್ ನಲ್ಲಿ ಕನಿಷ್ಠ 21 ಸಾವಿರ ರೂ. ವೇತನ ನಿಗದಿ ಹಾಗೂ ಸೇವಾ ಭದ್ರತೆ ಒದಗಿಸಬೇಕು. ನಮ್ಮನ್ನು ಡಿ ಗ್ರೂಪ್ ನೌಕರರು ಎಂದು ಪರಿಗಣಿಸಬೇಕು. ಈ ಕುರಿತು ಕಾನೂನು ಇಲಾಖೆಯಲ್ಲಿಯೂ ಅನುಮೋದನೆ ದೊರೆತಿದೆ ಎಂದು ಹೇಳಿದರು.
ಸಂಘದ ರಾಜ್ಯ ಖಜಾಂಚಿ ಶ್ರೀನಿವಾಸ್, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಡಿ.ಬಸವರಾಜು, ಪ್ರಧಾನ ಕಾರ್ಯದರ್ಶಿ ಎಸ್.ಅರುಣ್‌ಕುಮಾರ್, ಕಾನೂನು ಸಲಹೆಗಾರ ಪಾವಗಡ ಶ್ರೀರಾಮ್, ಪದಾಧಿಕಾರಿಗಳಾದ ಮುನಿಯಪ್ಪ, ಮಂಜುನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net