

ಮೈಸೂರು: ಮಹಾರತ್ನ ಟ್ರಸ್ಟ್ ವತಿಯಿಂದ ಕನ್ನಡ ಗೀತ ಗಮನ ನಡಿಗೆಯೊಂದಿಗೆ ಗಾಯನ, ಕನ್ನಡ ಉಳಿಸಿ, ಕನ್ನಡ ಬೆಳೆಸಿ ಎಂಬ ಶೀರ್ಷಿಕೆಯ ಕಾರ್ಯಕ್ರಮವನ್ನು ನ.25ರಂದು ಬೆಳಗ್ಗೆ 9 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಮೈಸೂರು ಮಹಾಲಿಂಗು ಹೇಳಿದರು.
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ಟಿ.ಎಸ್.ಶ್ರೀವತ್ಸ, ಹರೀಶ್‌ಗೌಡ, ಮಾಜಿ ಮೇಯರ್ ಶಿವಕುಮಾರ್ ಇನ್ನಿತರರು ಚಾಲನೆ ನೀಡುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ವೇಳೆ ಕನ್ನಡಾಂಬೆ ಮೂರ್ತಿಯುಳ್ಳ ಸ್ತಬ್ಧಚಿತ್ರದೊಡನೆ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕನ್ನಡ ಗೀತೆ, ಜಾನಪದ ಗೀತೆ ಹಾಡುತ್ತ ರಾಮಸ್ವಾಮಿ ವೃತ್ತದ ಮೂಲಕ ನಡಿಗೆಯಲ್ಲಿ ಸಾಗಿ ಮಹಾರಾಣಿ ವಿಜ್ಞಾನ ಕಾಲೇಜು ತಲುಪಲಿದ್ದಾರೆ. ವಿದ್ಯಾರ್ಥಿನಿಯರು ಕನ್ನಡಾಂಬೆ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ನಾಡಗೀತೆ ಹಾಡಲಿದ್ದಾರೆ ಎಂದರು.
ಟ್ರಸ್ಟ್ ಪದಾಧಿಕಾರಿಗಳಾದ ರೂಪಾ, ನಾಗಶ್ರೀ, ಸಂದೇಶ್, ವಿಜಯಶ್ರೀ, ಕೌಸಲ್ಯಾ ಇದ್ದರು.