21ರಂದು ಪಟ್ಟಣಕ್ಕೆ ಸಿಎಂ, ವಿವಿಧ ಕಾಮಗಾರಿಗಳ ಲೋಕಾರ್ಪಣೆ

NLTD-17-1
ನಾಲತವಾಡ ಪಟ್ಟಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಗಮಿಸಲಿರುವ ಹಿನ್ನೆಲೆಯಲ್ಲಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೆಲಿಪ್ಯಾಡ್ ಲ್ಯಾಂಡಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೆಬಿಜೆಎನ್‌ಎಲ್ ಇಲಾಖೆಯ ಸಿಇ ಡಿ. ಬಸವರಾಜ, ಎಚ್. ಸುರೇಶ, ಆರ್.ಎಲ್. ಹಳ್ಳೂರ, ಪಪಂ ಸಿಒ ಎಸ್.ಎಸ್. ಬಾಗಲಕೋಟೆ, ಎಂ.ಎಸ್. ಪಾಟೀಲ ಇತರರಿದ್ದರು.
Published on

ನಾಲತವಾಡ: ಪಟ್ಟಣದಲ್ಲಿ ವಿವಿಧ ಕಾಮಗಾರಿಗಳ ಲೋಕಾರ್ಪಣೆ, ಶಂಕುಸ್ಥಾಪನೆ ನೆರವೇರಿಸಲು ಮಾ.21 ರಂದು ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸುವರು ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಹೆಲಿಪ್ಯಾಡ್ ಲ್ಯಾಂಡಿಂಗ್ ಸ್ಥಳ ಪರಿಶೀಲಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

50 ವರ್ಷಗಳಿಂದ ಅಭಿವೃದ್ಧಿಯಿಂದ ವಂಚಿತಗೊಂಡಿದ್ದ ನಾಲತವಾಡ ಪಟ್ಟಣದಲ್ಲಿ ನನ್ನ ಅಧಿಕಾರಾವಧಿಯಲ್ಲಿ ಬೃಹತ್ ಬಸ್ ನಿಲ್ದಾಣ, ಸಭಾಭವನ, 120 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆಗಳು, ಸಮಾಜ ಸುಧಾರಕ ಅಣ್ಣ ಬಸವಣ್ಣ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ವಿರೇಶ್ವರ ಶರಣರ ಪುತ್ಥಳಿ ನಿರ್ಮಾಣಗೊಂಡಿದ್ದು, ಅವುಗಳನ್ನು ಸಿಎಂ ಬೊಮ್ಮಾಯಿ ಅವರು ಲೋಕಾರ್ಪಣೆಗೊಳಿಸಲಿದ್ದಾರೆ ಎಂದರು.

ವಿರೇಶ್ವರ ವಿದ್ಯಾಸಂಸ್ಥೆಯಲ್ಲಿ ಆವರಣದಲ್ಲಿ ನಿರ್ಮಿಸಲಾಗುವ ಬೃಹತ್ ವೇದಿಕೆಯನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿ ಮಾತನಾಡುವರು. ತಾಲೂಕಿನ ಇಡಿ ಅಭಿವೃದ್ಧಿ ಕಾಮಗಾರಿಗಳಾದ ಬಹುದೊಡ್ಡ ಕುಡಿಯುವ ನೀರಿನ ಜಲದಾರೆ ಯೋಜನೆ, ಮುದ್ದೇಬಿಹಾಳದ ಎಸ್ಸಿ ಎಸ್‌ಟಿ ವಸತಿ ಶಾಲೆ, ಪದವಿ ಕಾಲೇಜು, ಡಾ. ಬಾಬಾಸಾಹೇಬ ಅಂಬೇಡ್ಕರ್ ಭವನ, ಇಂಧನ ಇಲಾಖೆಯ ತಾಳಿಕೋಟೆ ಹಾಗೂ ಹಿರೇಮುರಾಳದ 110 ಕೆವಿ ವಿದ್ಯುತ್ ಉತ್ಪಾದನಾ ಘಟಕಗಳ ಉದ್ಘಾಟನೆ, ಕೋಳೂರ, ಜಟ್ಟಿಗೆ, ಹೊನಳ್ಳಿ ಬಸರಕೋಡ ಹಾಗೂ ವಿದ್ಯುತ್ ಘಟಕಗಳ ನಿರ್ಮಾಣದ ಶಂಕುಸ್ಥಾಪನೆ ಸೇರಿ ಮತಕ್ಷೇತ್ರದ ಅಂದಾಜು 259 ಶಾಲಾ ಕೊಠಡಿಗಳ ಉದ್ಘಾಟನೆಗೊಳ್ಳುತ್ತವೆ. ಅಲ್ಲದೆ, ಈ ಭಾಗದ ನೀರಾವರಿಗೆ ಅಂದಾಜು 600 ಕೋಟಿ ರೂ. ವೆಚ್ಚದ ಆಧುನೀಕರಣದ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದರು.

ಪೊಲೀಸ್ ಅಧಿಕಾರಿಗಳ ಭೇಟಿ
ಪಟ್ಟಣಕ್ಕೆ ಡಿವೈಎಸ್‌ಪಿ ಕರುಣಾಕರ ಶೆಟ್ಟಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಸೇರಿ ಪೊಲೀಸ್ ತಂಡ ಆಗಮಿಸಿ ಸ್ಥಳ ಪರಿಶೀಲಿಸಿ ಶಾಸಕರೊಂದಿಗೆ ಸಮಾಲೋಚನೆ ನಡೆಸಿತು. ಕೆಬಿಜೆಎನ್‌ಎಲ್ ಇಲಾಖೆಯ ಸಿಇ ಡಿ. ಬಸವರಾಜ, ಎಚ್. ಸುರೇಶ, ಆರ್.ಎಲ್. ಹಳ್ಳೂರ, ಪಪಂ ಸಿಒ ಎಸ್.ಎಸ್. ಬಾಗಲಕೋಟೆ, ಎಂ.ಎಸ್. ಪಾಟೀಲ, ಕೆ.ಆರ್. ಎತ್ತಿನಮನಿ, ಜಿ. ಮಹಾಂತೇಶ, ಪಪಂ ಮಾಜಿ ಉಪಾಧ್ಯಕ್ಷ ವೀರೇಶ ಚಲವಾದಿ, ಗಿರೀಶಗೌಡ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net