

ಮೈಸೂರು: ಕೆ.ಆರ್.ನಗರ ತಾಲೂಕಿನ ರೈತನಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಜ.16ರಂದು ವಿಜಯನಗರ ಎರಡನೇ ಹಂತದಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕುವುದಾಗಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ತಿಳಿಸಿದರು.
ತಾಲೂಕಿನ ಮಾರ್ಚಳ್ಳಿ ಗ್ರಾಮದ ಪಾಪೇಗೌಡ ಅವರ ಪುತ್ರ ದೊರೆಸ್ವಾಮಿ 2013ರಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಿಂದ ಪಿಎಂಇಜಿಪಿ ಯೋಜನೆಯಡಿ 15 ಲಕ್ಷ ರೂ. ಸಾಲ ಪಡೆದಿದ್ದರು. ಬಳಿಕ ಅವರು ಒನ್‌ಟೈಂ ಸೆಟಲ್‌ಮೆಂಟ್‌ನಲ್ಲಿ 19 ಲಕ್ಷ ರೂ. ತೀರಿಸಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಯೋಜನೆಯಡಿ ರೈತ ಸಾಲ ಪಡೆಯುವ ವೇಳೆ ಸರ್ಕಾರವೇ ಗ್ಯಾರಂಟಿ ಆದರೂ ಕಾನೂನುಬಾಹಿರವಾಗಿ ರೈತನಿಂದ ಎಂಟು ಎಕರೆ ಜಮೀನು ಹಾಗೂ ಮನೆಯನ್ನು ಹೊಂದಾಣಿಕೆ ಮಾಡಿಸಿಕೊಳ್ಳಲಾಗಿದೆ. ಬ್ಯಾಂಕ್‌ನವರು ತಿಳಿಸಿದಾಗಲೆಲ್ಲ ಹಣ ಸಂದಾಯ ಮಾಡಿದ್ದರಿಂದ ಸಾಲ ತೀರಿತೆಂದು ಸುಮ್ಮನಾಗಿದ್ದರು. ಆದರೆ ಕೆ.ಆರ್.ನಗರ ಪಟ್ಟಣದಲ್ಲಿರುವ ನಾಲ್ಕು ಕೋಟಿ ರೂ. ಬೆಲೆ ಬಾಳುವ ಮೂಲೆ ನಿವೇಶನದಲ್ಲಿನ ಮನೆಯನ್ನು ಏಕ ವ್ಯಕ್ತಿಗೆ ಅತಿ ಕಡಿಮೆ ಬೆಲೆಗೆ ಹರಾಜು ಮಾಡಲಾಗಿದೆ. ಬ್ಯಾಂಕ್‌ನ ಪ್ರಧಾನ ಕಚೇರಿ ಸಂಪರ್ಕಿಸಿದರೆ ಸಾಲ ತೀರಿದೆ ಎನ್ನುತ್ತಾರೆ. ಇಲ್ಲಿನ ಅಧಿಕಾರಿಗಳು ನಿರಾಕರಿಸುತ್ತ ರೈತನ ಕುಟುಂಬವನ್ನು ಬೀದಿ ಪಾಲು ಮಾಡಿದ್ದಾರೆ. ಹೀಗಾಗಿ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ಅಂದು ಬ್ಯಾಂಕ್ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ತಿಳಿಸಿದರು.
ರೈತ ಮುಖಂಡರಾದ ಪಿ.ಮರಂಕಯ್ಯ, ಆನಂದೂರು ಪ್ರಭಾಕರ್, ನಾಗನಹಳ್ಳಿ ವಿಜಯೇಂದ್ರ, ನಾಗನಹಳ್ಳಿ ಚಂದ್ರಶೇಖರ್ ಹಾಗೂ ಸಂತ್ರಸ್ತ ರೈತನ ತಂದೆ ಪಾಪೇಗೌಡ ಇದ್ದರು.