

ರಾಮದುರ್ಗ: ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಪ್ರತಿ ಗ್ರಾಪಂ ಮಟ್ಟದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ನಡೆಸಲಾಗುತ್ತಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಪಟ್ಟಣದ ಪ್ರೆಸ್‌ಕ್ಲಬ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಅನುದಾನ ನೀಡುತ್ತಿದೆ. ಆದರೆ, ಸರಿಯಾಗಿ ಅನುಷ್ಠಾನ ಮಾಡಿಲ್ಲ. ರಾಜ್ಯ ಸರ್ಕಾರದ ರೈತವಿರೋಧಿ ನೀತಿ ವಿರುದ್ಧ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದ ಸಂದರ್ಭದಲ್ಲಿ ಡಿ.13 ರಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನ ನೇತತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಕೇಂದ್ರ ಸರ್ಕಾರ ರೈತರ ಕ್ಷೀರ ಉದ್ಯಮ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 10 ಸಾವಿರ ಕೋಟಿ ರೂ.ನೀಡಿ ಕ್ಷೀರ ಬ್ಯಾಂಕ್ ಸ್ಥಾಪನೆ ಮಾಡಿದೆ. ಕೇಂದ್ರ ಸರ್ಕಾರ ಪ್ರತಿಯೊಬ್ಬ ಬೀದಿ ಬದಿ ವ್ಯಾಪಾರಸ್ಥರಿಗೆ 10 ಸಾವಿರ ರೂ.ಸಾಲ ನೀಡಿ ಅವರ ಸಕಾಲಕ್ಕೆ ಮರುಪಾವತಿ ಮಾಡಿದಲ್ಲಿ ಅದನ್ನು ದುಪ್ಪಟ್ಟುಗೊಳಿಸುತ್ತ ಗರಿಷ್ಠ ರೂ.10 ಲಕ್ಷ ರೂ.ವರೆಗೆ ಸ್ವಯಂ ಉದ್ಯೋಗಕ್ಕೆ ಸಾಲ ನೀಡಿ ಪ್ರೋತ್ಸಾಹಿಸುತ್ತಿದೆ. ವಿಶ್ವಕರ್ಮ ಯೋಜನೆಯಡಿ ಕುಶಲಕರ್ಮ ಉದ್ಯೋಗಕ್ಕೆ ಶೇ.50 ಸಬ್ಸಿಡಿ ಆಧಾರಿತ ಸಾಲ ಸೌಲಭ್ಯ ಘೋಷಣೆ ಮಾಡಿದ್ದು, ದೇಶಕ್ಕೆ ಮೋದಿ ಗ್ಯಾರಂಟಿ ತಿಳಿಸುತ್ತ ಲೋಕಸಭಾ ಚುನಾವಣೆಯ ತಯಾರಿ ನಡೆಸಲಾಗುತ್ತದೆ ಎಂದು ಈರಣ್ಣ ಕಡಾಡಿ ತಿಳಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ರಾಜೇಶ ಬೀಳಗಿ, ಮುಖಂಡರಾದ ಪಿ.ಎ್ ಪಾಟೀಲ, ಡಾ.ಕೆ.ವಿ.ಪಾಟೀಲ ಪಾಟೀಲ ಇತರರಿದ್ದರು.