

ಶಿವಮೊಗ್ಗ: ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಯುವನಿಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಚಿವರು ಜ.12ರ ಬೆಳಗ್ಗೆ 11ಕ್ಕೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ತಿಳಿಸಿದರು.
ಅಂದು ಶಿವಮೊಗ್ಗ ಸೇರಿ ನಾಲ್ಕೈದು ಜಿಲ್ಲೆಗಳ ಫಲಾನುಭವಿಗಳು ಸಮಾರಂಭಕ್ಕೆ ಆಗಮಿಸುವರು. ಯೋಜನೆಗೆ ಸಂಬಂಧಿಸಿದಂತೆ ಸಚಿವರು ಬಂದು ಸಭೆ ನಡೆಸಲಿದ್ದು ನಂತರ ಕಾರ್ಯಕ್ರಮದ ವಿವರವನ್ನು ಜಿಲ್ಲಾ ಕಾಂಗ್ರೆಸ್ ಮಾಡಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಚುನಾವಣಾ ಪೂರ್ವದಲ್ಲಿ ನುಡಿದಂತೆ ಕಾಂಗ್ರೆಸ್ ನಡೆದುಕೊಂಡಿದೆ. ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 3,52,339 ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆಜಿ ಅಕ್ಕಿ ಬದಲು ಹಣ ಜಮಾ ಆಗುತ್ತಿದೆ. ಶಕ್ತಿ ಯೋಜನೆಯಡಿ 1,45,91,964 ಮಹಿಳೆಯರು ಪ್ರಯಾಣ ಮಾಡಿದ್ದು 49.69 ಕೋಟಿ ರೂ. ಆದಾಯ ಬಂದಿದೆ. ಗೃಹಜ್ಯೋತಿ ಯೋಜನೆಯಡಿ 4,53,426 ಫಲಾನುಭವಿಗಳಿಗೆ ಶೂನ್ಯ ಬಿಲ್ ನೀಡಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ 3,65,664 ನೋಂದಣಿ ಆಗಿದ್ದು 3,55,643 ಮಂದಿಗೆ ಪ್ರತಿ ತಿಂಗಳು ತಲಾ ಎರಡು ಸಾವಿರ ರೂ. ಡಿಬಿಟಿ ಮೂಲಕ ನೇರವಾಗಿ ಖಾತೆಗೆ ಜಮಾ ಆಗುತ್ತಿದೆ. ಇಷ್ಟೆಲ್ಲ ಮಾಡಿದರೂ ಪ್ರತಿಪಕ್ಷಗಳು ಸುಮ್ಮನೆ ಬಾಯಿ ಬಡಿದುಕೊಳ್ಳುತ್ತಿವೆ ಎಂದು ಕಿಡಿಕಾರಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಸ್.ಚಂದ್ರಭೂಪಾಲ್, ಚಂದ್ರಶೇಖರ್ ಇತರರಿದ್ದರು.
ಪ್ರಧಾನಿ ನರೇಂದ್ರ ಮೋದಿ ನೇರ ಹೊಣೆ
ಕರೊನಾ ಸಂದರ್ಭದಲ್ಲಿ ವಿದೇಶದಿಂದ ಕೇರಳಕ್ಕೆ ಬಂದ ವ್ಯಕ್ತಿಗೆ ಸೋಂಕು ತಗುಲಿತ್ತು. ತಕ್ಷಣವೇ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ವಿಮಾನ ಸಂಚಾರ ಸ್ಥಗಿತಗೊಳಿಸಿದ್ದರೆ ಸೋಂಕು ದೇಶಾದ್ಯಂತ ಹರಡುತ್ತಿರಲಿಲ್ಲ. ತಮ್ಮವರನೆಲ್ಲ ಕರೆಸಿಕೊಳ್ಳುವುದಕ್ಕಾಗಿ ವಿಳಂಬ ಮಾಡಿದ ಕಾರಣ ಸೋಂಕು ಹರಡಿತು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ನೇರ ಹೊಣೆ ಎಂದು ಸುಂದರೇಶ್ ದೂರಿದರು.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ನೇರವಾಗಿ ಆರೋಪ ಮಾಡಿದ್ದಾರೆ. ಕರೊನಾ ಕಿಟ್ ಖರೀದಿಯಲ್ಲೇ 40 ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂದು ಹೇಳಿದ್ದಾರೆ. ಈ ಹಗರಣದ ನ್ಯಾಯಾಂಗ ತನಿಖೆ ಆಗಬೇಕು. ಯತ್ನಾಳ್‌ಗೆ ಸ್ವಾಭಿಮಾನವಿದ್ದರೆ ತಕ್ಷಣ ಪಕ್ಷಕ್ಕೆ ರಾಜಿನಾಮೆ ಕೊಟ್ಟು ಹೊರಬರಬೇಕು ಎಂದು ಒತ್ತಾಯಿಸಿದರು.