ಸರ್ವಕಾಲಕ್ಕೂ ಸರ್ವಜ್ಞನ ವಚನಗಳು ಪ್ರಸ್ತುತ: ಕೆ.ಎಂ.ಗಾಯತ್ರಿ

7
Published on

ಮೈಸೂರು: ತ್ರಿಪದಿಯಲ್ಲಿ ಎಲ್ಲರಿಗೂ ಅರ್ಥವಾಗುವಂತಹ ಸಾಹಿತ್ಯ ರಚಿಸುವ ಮೂಲಕ ಸರ್ವರಿಗೂ, ಸರ್ವಕಾಲಕ್ಕೂ ಅನ್ವಯವಾಗುವ ವಚನಗಳನ್ನು ಸರ್ವಜ್ಞ ರಚಿಸುವ ಮೂಲಕ ಮಾದರಿಯಾಗಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ಹೇಳಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾಮಂದಿರದ ಕಿರುರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿನ ಅಂಕು ಡೊಂಕು, ಮೂಢನಂಬಿಕೆ, ಹಳೆಯ ಸಂಪ್ರದಾಯಗಳು ಮತ್ತು ಕಟ್ಟುಪಾಡುಗಳ ಕುರಿತು ತನ್ನ ವಚನಗಳಲ್ಲಿ ಸರ್ವಜ್ಞ ಕವಿ ಪ್ರಸ್ತುತಪಡಿಸಿದ್ದಾರೆ. ಮುಂದಿನ ಪೀಳಿಗೆಗೆ ಮಾದರಿಯಾಗುವ ನಿಟ್ಟಿನಲ್ಲಿ ಜಯಂತಿಗಳನ್ನು ನಾವು ಆಚರಣೆ ಮಾಡಬೇಕಿದೆ. 12ನೇ ಶತಮಾನದಲ್ಲಿ ಕನ್ನಡದ ವಚನ ಸಾಹಿತ್ಯ ಕಬ್ಬಿಣದ ಕಡಲೆಯಾಗಿತ್ತು. ನಂತರದ ಕಾಲಮಾನದಲ್ಲಿ ಸರ್ವಜ್ಞನ ವಚನಗಳು ಸುಲಭ ರೀತಿಯಲ್ಲಿ ಜನಸಾಮಾನ್ಯರಿಗೂ ಅರ್ಥವಾಗುವಂತಹ ರೀತಿಯಲ್ಲಿ ತ್ರಿಪದಿಗಳು ರಚನೆಗೊಂಡಿವೆ ಎಂದರು.
ಸರ್ವಜ್ಞನ ವಚನಗಳಲ್ಲಿರುವ ಆದರ್ಶ, ತತ್ವಗಳು, ಸಮಾಜದಲ್ಲಿರುವ ಅನಾಚಾರಗಳನ್ನು ತಿದ್ದುವ ಕೆಲಸ ಮಾಡುತ್ತವೆ. ಉತ್ತಮವಾದ ಸಮಾಜವನ್ನು ಬಲಪಡಿಸುವಂತಹ ಸಾರಾಂಶಗಳು ಇವರ ತ್ರಿಪದಿಗಳಲ್ಲಿ ಇದೆ. ಪ್ರತಿಯೊಂದು ತ್ರಿಪದಿಯೂ ಸಹ ವೈಜ್ಞಾನಿಕವಾದ ವಿಮರ್ಶೆಯನ್ನು ಒಳಗೊಂಡಿವೆ. ಸರ್ವ ಕಾಲಕ್ಕೂ ಅನ್ವಯಿಸುವ ತತ್ವಗಳನ್ನು ಕವಿ ಸರ್ವಜ್ಞ ಕೊಟ್ಟಿದ್ದಾರೆ. ಇದು ಕೇವಲ ಒಂದೇ ಸಮಾಜಕ್ಕೆ ಅಥವಾ ಸಮುದಾಯಕ್ಕೆ ಸೀಮಿತವಲ್ಲ ಸರ್ವಜನರಿಗೂ ಅನ್ವಯಿಸುತ್ತದೆ ಎಂದರು.
ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಪ್ರಭಾಕರ್ ಹೆಗ್ಗಂದೂರ್ ಮಾತನಾಡಿ, ಆಡುಭಾಷೆಯಲ್ಲಿ ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ ಸಮಾಜ ಸುಧಾರಕ, ತ್ರಿಪದಿಗಳ ಮೂಲಕ ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆ ನೀಡಿದ ಶ್ರೇಷ್ಠ ವಚನಕಾರ ಸರ್ವಜ್ಞ ಎಂದು ಬಣ್ಣಿಸಿದರು.
ತ್ರಿಪದಿಗಳ ಮೂಲಕ ಸರ್ವಜ್ಞ ಎಲ್ಲರ ಮನದಲ್ಲಿ ಉಳಿದಿದ್ದಾರೆ. ಸಾಗರದಂತಹ ದೊಡ್ಡ ವಿಷಯದ ಅಂಶಗಳನ್ನು ಸಾಸಿವೆ ಗಾತ್ರದಲ್ಲಿ ಅರ್ಥೈಸುವ ಸಂತ ಕವಿ ಸರ್ವಜ್ಞ. ತನಗೆ ತಿಳಿದದ್ದನ್ನು ಹಾಗೂ ನೋಡಿದ್ದನ್ನು ತ್ರಿಪದಿ ಮೂಲಕ ಬರೆದವರು ಸರ್ವಜ್ಞ ಎನ್ನುತ್ತಾ ಸರ್ವಜ್ಞನ ಕೆಲವು ಜನಪ್ರಿಯ ತ್ರಿಪದಿಗಳನ್ನು ಅವುಗಳ ಸಾರಾಂಶವನ್ನು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎಸ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ ಸುದರ್ಶನ್, ಕುಂಬಾರ ಸಂಘದ ಜಿಲ್ಲಾ ಅಧ್ಯಕ್ಷ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಕೆ.ಆರ್.ಸೋಮಶೇಖರ್, ಮಹಿಳಾ ಸಂಘದ ಅಧ್ಯಕ್ಷೆ ರೇಣುಕಾಂಬ, ಸರ್ವಜ್ಞ ಸೇವಾ ಸಮಿತಿ ಅಧ್ಯಕ್ಷ ವಾಸು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net