ಸರ್ವಜ್ಞರ ವಿಚಾರಗಳು ನಿತ್ಯ ಜೀವನಕ್ಕೆ ಅಗತ್ಯ

mng_20 feb jayanthi
ಬೋಂದೆಲ್ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ನಲ್ಲಿ ನಡೆದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಶಾಸಕ ಡಾ. ವೈ ಭರತ್ ಶೆಟ್ಟಿ ಉದ್ಘಾಟಿಸಿದರು.
Published on

ಮಂಗಳೂರು: ತ್ರಿಪದಿಯ ಮೂಲಕ ಜನರಿಗೆ ವಿಚಾರಗಳನ್ನು ಮನದಟ್ಟು ಮಾಡಿರುವ ದಾರ್ಶನಿಕ ಸರ್ವಜ್ಞರ ವಿಚಾರಗಳು ನಿತ್ಯ ಜೀವನಕ್ಕೆ ಅಗತ್ಯವಾಗಿದೆ ಹಾಗೂ ಮಹತ್ವಪೂರ್ಣವಾಗಿದೆ. ಇಡೀ ವಿಶ್ವದಲ್ಲಿ ಹಳೆಯ ನಾಗರಿಕತೆ ಭಾರತೀಯ ಸಂಸ್ಕೃತಿ. ಇಂತಹ ಸಂಸ್ಕೃಯಲ್ಲಿ ಸರ್ವಜ್ಞನಂತಹ ಹಿರಿಯರು ಸಾಧನೆ ಮಾಡಿದ್ದಾರೆ. ಇದನ್ನು ತಿಳಿದುಕೊಂಡರೆ ಮನೋಸ್ಥೈರ್ಯ ಬರಲು ಸಾಧ್ಯ ಎಂದು ಶಾಸಕ ಡಾ. ವೈ ಭರತ್ ಶೆಟ್ಟಿ ಹೇಳಿದರು.

ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘ, ಕರಾವಳಿ ವಿಭಾಗ ಮತ್ತು ಕರಾವಳಿ ಕುಲಾಲರ, ಕುಂಬಾರರ ಯುವ ವೇದಿಕೆ ಇವರ ಸಹಕಾರದೊಂದಿಗೆ ಗುರುವಾರ ಬೋಂದೆಲ್ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ನಲ್ಲಿ ನಡೆದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

16ನೇ ಶತಮಾನದಲ್ಲಿ ಕುಲಾಲ ಸಮುದಾಯದಲ್ಲಿ ಹುಟ್ಟಿದ ಸಂತ ಕವಿ ಸರ್ವಜ್ಞ ಜೀವನವನ್ನು ಯಾವ ದೃಷ್ಟಿಕೋನದಿಂದ ನೋಡುತ್ತಿದ್ದ ಎಂಬುದನ್ನು ನಾವು ಅವರ ತ್ರಿಪದಿಗಳನ್ನು ಓದಿದಾಗ ತಿಳಿಯುತ್ತದೆ. ಮೂರು ಪುಟಗಳವರೆಗೆ ಬರೆಯುವ ವಿಚಾರವನ್ನು ಕೇವಲ ಮೂರೇ ಸಾಲುಗಳಲ್ಲಿ ತಿಳಿಸುವ ಸರ್ವಜ್ಞನ ತ್ರಿಪದಿಗಳನ್ನು ವಿದ್ಯಾರ್ಥಿಗಳು ಓದಿ ಅರಿತುಕೊಳ್ಳಬೇಕು. ಸರ್ವಜ್ಞ ತಮ್ಮ ತ್ರಿಪದಿಯಲ್ಲಿ ಜಗತ್ತಿನ ಜ್ಞಾನ, ವೈಚಾರಿಕತೆ, ಮಾನವೀಯ ಮೌಲ್ಯಗಳನ್ನು ತಿಳಿಸಿಕೊಟ್ಟಿದ್ದಾರೆ. ಇಂತಹ ಮಾನವೀಯ ಮೌಲ್ಯಗಳುಳ್ಳ ತ್ರಿಪದಿಗಳನ್ನು ವಿದ್ಯಾರ್ಥಿಗಳು ಓದಬೇಕು. ತನ್ನ ಸರಳವಾದ ಭಾಷೆಯ ತ್ರಿಪದಿಯ ಮೂಲಕ ಜನರನ್ನು ಜಾಗೃತಗೊಳಿಸಿದ ಕವಿ ಸರ್ವಜ್ಞ ಅವರ ಮಾತುಗಳು ಎಲ್ಲಾ ಜಾತಿ, ಧರ್ಮಗಳಿಗೆ ಅನ್ವಯವಾಗುತ್ತದೆ. ಅವರ ನೀತಿ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಭವಿಷ್ಯದ ಭಾರತವನ್ನು ಬಲಿಷ್ಟಗೊಳಿಸಬೇಕು ಎಂದರು.

ಮೇಯರ್ ಮನೋಜ್ ಕುಮಾರ್ ಮಾತನಾಡಿ, ಸರ್ವ ಜ್ಞಾನವನ್ನು ಹೊಂದಿದ ತ್ರಿಪದಿ ಕವಿ ಸರ್ವಜ್ಞ ಜನರ ಜೀವನಕ್ಕೆ, ಸಮಾಜಕ್ಕೆ ಉತ್ತಮ ಸಂದೇಶವನ್ನು ತಮ್ಮ ವಚನಗಳ ಮೂಲಕ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕರಾವಳಿ ಕುಂಬಾರರ ಯುವ ವೇದಿಕೆ ಬೇಡಿಕೆಯನ್ನು ಪೂರೈಸುತ್ತೇನೆ.

ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ ಎಸ್ ಗಟ್ಟಿ, ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಯತೀಶ್ ಕುಮಾರ್, ಬೋಂದೆಲ್ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಪ್ರಾಂಶುಪಾಲ ಗುಣವಂತ ವಿ ಗುನಗಿ, ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘದ ಕಾರ್ಯಾಧ್ಯಕ್ಷ ಎಂ ಅಣ್ಣಯ್ಯ ಕುಲಾಲ್ ಉಳ್ತೂರು, ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆ ಅಧ್ಯಕ್ಷ ಗಂಗಾಧರ ಬಂಜನ್, ಗಣೇಶ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿ, ಎಚ್. ಕೆ ನಯನಾಡು ನಿರೂಪಿಸಿದರು.

------------------

ಅನುಭವಕ್ಕಿಂತ ಮಿಗಿಲಾದ ಜ್ಞಾನವಿಲ್ಲ!

ಉಪನ್ಯಾಸ ನೀಡಿದ ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಯತೀಶ್ ಕುಮಾರ್ ಮಾತನಾಡಿ, 16ನೇ ಶತಮಾನದ ಸರ್ವಜ್ಞರ ನಿಜನಾಮ ಪುಷ್ಪದತ್ತ. ಜೀವನ ಅನುಭವಕ್ಕಿಂತ ಮಿಗಿಲಾದ ಜ್ಞಾನ ಬೇರೊಂದಿಲ್ಲ ಎಂಬುದನ್ನು ವಚನದ ಮೂಲಕ ಸರ್ವಜ್ಞ ತಿಳಿಸಿದ್ದಾರೆ. ಅವರ ಅಗಾಧ ಜ್ಞಾನದಿಂದ ಸರ್ವಜ್ಞ ಎಂಬ ಹೆಸರನ್ನು ಪಡೆದಿದ್ದಾರೆ. ಸಂಸ್ಕೃತದಲ್ಲಿ ಸರ್ವಜ್ಞ ಎಂದರೆ ಸರ್ವಜ್ಞಾನವನ್ನು ಹೊಂದಿದವರು ಎಂಬ ಅರ್ಥವಿದೆ. ಸರ್ವಜ್ಞನನ್ನು ತ್ರಿಪದಿ ಬ್ರಹ್ಮ ಎಂದು ಗುರುತಿಸಲಾಗಿದೆ. ನೇರ ಕಟು ಸತ್ಯವನ್ನು ತಮ್ಮ ತ್ರಿಪದಿಯ ಮೂಲಕ ತಿಳಿಸಿದ್ದಾರೆ. ಜೀವನ ಮೌಲ್ಯವನ್ನು ರೂಪಿಸಿದ ಹಿನ್ನೆಲೆಯಲ್ಲಿ ಸರ್ವಜ್ಞ ಸರ್ವಕಾಲಿಕನೂ ಆಗಿ ಮನ್ನಣೆ ಪಡೆದಿದ್ದಾರೆ. ಸರ್ವಜ್ಞ ಮಹಾಕವಿಯ ವಿಚಾರಧಾರೆ ವೈಯಕ್ತಿಕ ಬದುಕಿಗೆ ಹೆಚ್ಚಿನ ಬೆಳಕು ನೀಡಲಿ. ಸರ್ವಜ್ಞ ನೀಡಿದ ಸಂದೇಶ ಪ್ರತಿಯೊಂದು ಕಡೆಗೂ ತಲುಪಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net