

ಮಂಡ್ಯ: ನಗರದ ಹೊರವಲಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸ್ಮಮೇಳನದಲ್ಲಿ ವಿಶ್ವಗುರು ಬಸವಣ್ಣ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರ ಮತ್ತು ಹೆಸರನ್ನು ಬಳಸದೇ ಕಡೆಗಣಿಸಲಾಗುತ್ತಿದೆ ಎಂದು ಕಲ್ಯಾಣ ಬಸವೇಶ್ವರ ಮಠದ ಓಂಕಾರೇಶ್ವರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಬಸವಣ್ಣ ಹಾಗೂ ಕುವೆಂಪು ಅವರನ್ನು ಮರೆಮಾಚುವ ಕೆಲಸ ಮಾಡುತ್ತಿದೆ. ಸಮ್ಮೇಳನಕ್ಕೆ ಹೊರಡಿಸಲಾಗುತ್ತಿರುವ ಭಿತ್ತಿ ಪತ್ರ, ಆಹ್ವಾನ ಪತ್ರ ಮತ್ತು ಪ್ರಚಾರ ಪತ್ರಗಳಲ್ಲಿ ಬಸವಣ್ಣ ಹಾಗೂ ಕುವೆಂಪು ಅವರು ಭಾವಚಿತ್ರವನ್ನು ಪ್ರಕಟ ಮಾಡುತ್ತಿಲ್ಲ. ಅವರ ಕುರಿತಾದ ಗೋಷ್ಠಿ ಕೂಡ ಇಲ್ಲ. ಇದು ಸಾಹಿತ್ಯ ಸಮ್ಮೇಳನಕ್ಕೆ ಕಪ್ಪು ಚುಕ್ಕಿ ಇದ್ದಂತೆ ಎಂದು ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಸಮ್ಮೇಳನದ ಮುಖ್ಯ ದ್ವಾರಕ್ಕೆ ಬಸವಣ್ಣನವರ ಹೆಸರನ್ನು ಇಡಬೇಕು. ಪ್ರಮುಖ ಸ್ಥಳಗಳಲ್ಲಿ ಬಸವಣ್ಣ ಹಾಗೂ ಕುವೆಂಪು ಅವರ ಭಾವಚಿತ್ರ ಅಳವಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಎಸ್.ಮಂಜುನಾಥ್, ಎಚ್.ವಿ.ಶಿವರುದ್ರಸ್ವಾಮಿ, ಶಿವಲಿಂಗಪ್ಪ, ಬೆಳ್ಳಪ್ಪ, ಎಲ್.ಡಿ.ನಂದೀಶ್, ಆನಂದಕುಮಾರ್ ಇದ್ದರು.