ಧಾರ್ಮಿಕ ದತ್ತಿ ಇಲಾಖಾ ಸಚಿವರ ಜತೆ ಸಭೆ

omkareshwara
Published on

ಮಡಿಕೇರಿ:

ಮಡಿಕೇರಿಯ ಐತಿಹಾಸಿಕ ದೇವಾಲಯಗಳಾದ ಶ್ರೀ ಓಂಕಾರೇಶ್ವರ, ಶ್ರೀ ಆಂಜನೇಯ ಹಾಗೂ ಶ್ರೀ ಕೋಟೆ ಗಣಪತಿ ದೇವಾಲಯಗಳ ಅಭಿವೃದ್ಧಿ ಕುರಿತಾಗಿ ಬೆಂಗಳೂರಿನಲ್ಲಿ ಮಂಗಳವಾರ ವಿಶೇಷ ಸಭೆ ನಡೆಯಿತು. ರಾಜ್ಯ ಧಾರ್ಮಿಕ ದತ್ತಿ ಇಲಾಖಾ ಸಚಿವ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಇಲಾಖೆ ವತಿಯಿಂದ ಈ ವಿಶೇಷ ಸಭೆ ಕರೆಯಲಾಗಿತ್ತು.

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ನೇತೃತ್ವದಲ್ಲಿ ಏರ್ಪಡಿಸಲಾಗಿದ್ದ ಈ ಸಭೆಯಲ್ಲಿ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ. ದೇವಯ್ಯ ಮತ್ತು ಸದಸ್ಯರುಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ದೇವಾಲಯಗಳ ಹಿನ್ನೆಲೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಾದ ಸುಮಾರು 5 ಕೋಟಿ ರೂ. ವೆಚ್ಚದ ಕಾಮಗಾರಿಗಳ ಬಗ್ಗೆ ಡಿಜಿಟಲ್ ಚಿತ್ರೀಕರಣವನ್ನು ಪ್ರದರ್ಶಿಸಲಾಯಿತು.

ದೇವಾಲಯ ಸಮಿತಿಯಿಂದ ಐತಿಹಾಸಿಕ ಹಾಗೂ ಪ್ರಾಚೀನ ಮೂರು ದೇವಾಲಯಗಳಲ್ಲಿ ಅಗತ್ಯವಾಗಿ ಕೈಗೊಳ್ಳಬೇಕಾಗಿರುವ ಪ್ರಗತಿ ಕಾರ್ಯಗಳ ಕುರಿತು ಶಾಸಕ ಮಂತರ್ ಗೌಡ ಸಚಿವರ ಗಮನಕ್ಕೆ ತಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಧಾರ್ಮಿಕ ದತ್ತಿ ಇಲಾಖಾ ಆಯುಕ್ತ ವೆಂಕಟೇಶ್, ನಾವು ಇಲಾಖೆಯಿಂದ ಎಲ್ಲ ಯೋಜನೆಗಳನ್ನೊಳಗೊಂಡು ಮಾಸ್ಟರ್ ಪ್ಲಾನ್ ಮಾಡಿಸಿ ಹಂತ ಹಂತವಾಗಿ ಈ ಅಭಿವೃದ್ಧಿ ಕಾರ್ಯಗಳನ್ನು ನಡೆಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು. ಇದಕ್ಕೆ ಇಲಾಖೆಯ ಉಪ ಕಾರ್ಯದರ್ಶಿ ಎಂ. ಸತ್ಯವತಿ ಅವರೂ ದನಿಗೂಡಿಸಿದರು.

ಈ ಕುರಿತು ಸಚಿವ ರಾಮಲಿಂಗೇಗೌಡ ಪ್ರತಿಕ್ರಿಯಿಸಿ ಈ ಕೆಲಸಗಳಿಗೆಲ್ಲ ನೆರವು ನೀಡುವಷ್ಟು ಇಲಾಖೆಯಲ್ಲಿ ಹಣ ಲಭ್ಯವಿಲ್ಲ. ಶಾಸಕ ಮಂತರ್ ಗೌಡ ಅವರು ಪ್ರಯತ್ನಿಸಿದರೆ ಮುಖ್ಯಮಂತ್ರಿಯವರ ನಿಧಿಯಲ್ಲಿ ಸಾಕಷ್ಟು ಹಣವಿದೆ. ಅವರು ಕೊಡಬಹುದು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಕೆಂಪೇಗೌq,À ವ್ಯವಸ್ಥಾಪನಾ ಸಮಿತಿಯ ಇನ್ನಿತರ ಸದಸ್ಯರುಗಳಾದ ಸಂತೋಷ್ ಭಟ್, ಎ. ಕುಶಾಲಪ್ಪ, ಪ್ರಕಾಶ್ ಆಚಾರ್ಯ, ಜಿ.ರಾಜೇಂದ್ರ, ಎಂ.ಎ. ನಿರಂಜನ್, ಸಮಿತಿಯ ಕಾರ್ಯ ನಿರ್ವಾಹಣಾಧಿಕಾರಿ ದೇವರಾಜ್, ಉದ್ಯಮಿ ನವೀನ್ ಕುಶಾಲಪ್ಪ ಈ ಸಂದರ್ಭ ಇದ್ದರು.

ಸಭೆಯ ಬಳಿಕ ಸಮಿತಿಯವರೊಂದಿಗೆ ಮಾತನಾಡಿದ ಶಾಸಕ ಮಂತರ್ ಗೌಡ ಸದ್ಯದಲ್ಲಿಯೇ ನನ್ನ ಶಾಸಕ ನಿಧಿಯಿಂದಲೂ ಸೇರಿದಂತೆ ಮತ್ತಿತರ ಮೂಲಗಳಿಂದ ಹಣ ಒದಗಿಸಿ ಪ್ರಾರಂಭಿಕವಾಗಿ ಅಗತ್ಯವಾಗಿರುವ ರೂ. 1.50 ಕೋಟಿ ವೆಚ್ಚದ ಸಮುದಾಯ ಭವನ ನಿರ್ಮಾಣವನ್ನು ಕೈಗೆತ್ತಿಕೊಳ್ಳೋಣ ನಾನೆಂದಿಗೂ ಈ ಐತಿಹಾಸಿಕ ದೇವಾಲಯಗಳ ಅಭಿವೃದ್ಧಿ ಕಾರ್ಯದಲ್ಲಿ ನಿಮ್ಮೊಂದಿಗಿದ್ದೇನೆ ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net