

ಸದೇಶ್ ಕಾರ್ಮಾಡ್ ಮೈಸೂರು
ಶತಮಾನದ ಹೊಸ್ತಿಲಿನಲ್ಲಿರುವ ನಗರದ ದೊಡ್ಡಗಡಿಯಾರದ ಗೋಪುರ ದುಸ್ಥಿತಿಗೆ ತಲುಪಿದ ಹಿನ್ನೆಲೆಯಲ್ಲಿ 2 ವರ್ಷಗಳ ಹಿಂದೆ ಸಂರಕ್ಷಣಾ ಕಾಮಗಾರಿಗೆ ಚಾಲನೆ ದೊರೆಯಿತು. ಆದರೆ, ಇದೀಗ ಸಂರಕ್ಷಣಾ ಕಾಮಗಾರಿಯಲ್ಲಿಯೇ ಲೋಪ ಕಂಡು ಬಂದಿದೆ.
ಸಂರಕ್ಷಣಾ ಕಾಮಗಾರಿಯಲ್ಲಿ ಆಗುತ್ತಿರುವ ಲೋಪವನ್ನು ಗುರುತಿಸಿದ ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯ ಪ್ರೊ.ಎನ್.ಎಸ್. ರಂಗರಾಜು ನಗರ ಪಾಲಿಕೆಯ ಅಧಿಕಾರಿಗಳ ಗಮನ ಸೆಳೆದಿದ್ದರು. ನಂತರ ನಗರ ಪಾಲಿಕೆ ಅಧಿಕಾರಿಗಳು ಹಾಗೂ ಪ್ರೊ.ಎನ್.ಎಸ್. ರಂಗರಾಜು ಅವರು ದೊಡ್ಡಗಡಿಯಾರದ ಸಂರಕ್ಷಣಾ ಕಾಮಗಾರಿಯನ್ನು ವೀಕ್ಷಿಸಿ ಆಗಿರುವ ಲೋಪದೋಷದ ಕುರಿತು ಮಾಹಿತಿ ಪಡೆದು ಸೂಕ್ತ ರೀತಿಯಲ್ಲಿ ಕಾಮಗಾರಿ ಕೈಗೊಳ್ಳಲು ನಿರ್ದೇಶಿಸಲಾಗಿದೆ.
ಆಗಿರುವ ಲೋಪವೇನು?: ದೊಡ್ಡಗಡಿಯಾರ ಗೋಪುರದಲ್ಲಿ ನಾಲ್ಕು ಆಕರ್ಷಕ ಗೊಮ್ಮಟಗಳು ಇದ್ದವು. ಇದರಲ್ಲಿ ಒಂದು ಗೊಮ್ಮಟ ಹಾನಿಗೀಡಾಗಿತ್ತು. ಈ ಗೊಮ್ಮಟ ಮರು ನಿರ್ಮಾಣ ಮಾಡಿ ಉಳಿದ 3 ಗೊಮ್ಮಟಗಳನ್ನು ಸಂರಕ್ಷಣೆ ಮಾಡಬೇಕಾಗಿತ್ತು. ಆದರೆ, ಸಂರಕ್ಷಣಾ ಕಾಮಗಾರಿ ಕೈಗೊಂ ಡವರು ಅಲ್ಲಿದ್ದ ಎಲ್ಲ ಗೊಮ್ಮಟಗಳನ್ನು ಕಿತ್ತೆಸೆದು ಕಾಮಗಾರಿ ಪೂರ್ಣಗೊಳಿಸುವ ತರಾತುರಿಯಲ್ಲಿ ಇದ್ದರು. ಆದರೆ, ಪ್ರೊ.ಎನ್.ಎಸ್. ರಂಗರಾಜು ಆಗಿರುವ ಲೋಪವನ್ನು ಗುರುತಿಸಿ ಸಮರ್ಪಕವಾಗಿ ಸಂರಕ್ಷಣಾ ಕಾಮಗಾರಿ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.
ದುಸ್ಥಿತಿಯಲ್ಲಿತ್ತು ದೊಡ್ಡಗಡಿಯಾರ: ದೊಡ್ಡ ಗಡಿಯಾರ ಗೋಪುರದ ಮೇಲ್ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಒಳಭಾಗ ಶಿಥಿಲಾವಸ್ಥೆಯಿಂದ ಕೂಡಿತ್ತು. ಪಾರಂಪರಿಕ ತಜ್ಞರು ಪರಿಶೀಲಿಸಿದ ನಂತರ ದೊಡ್ಡ ಗಡಿಯಾರವನ್ನು ಹಾಗೆಯೇ ಬಿಟ್ಟರೆ ಭವಿಷ್ಯದಲ್ಲಿ ಗಡಿಯಾರದ ಗೋಪುರ ಕುಸಿದು ಬೀಳುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದ್ದರು. ಇದಾದ ನಂತರ ದೊಡ್ಡಗಡಿಯಾರ ಉಳಿವಿಗೆ ಪ್ರಯತ್ನ ಪ್ರಾರಂಭವಾಯಿತು. ನಗರ ಪಾಲಿಕೆಯ ಅಂದಿನ ಮೇಯರ್ ಶಿವಕುಮಾರ್ ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಕಾಮಗಾರಿಗೆ ಅವಶ್ಯಕವಾಗಿದ್ದ 43 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿಸಿದ್ದರು. ನಂತರ 9 ಆಗಸ್ಟ್ 2023 ರಂದು ಶಾಸಕ ಕೆ. ಹರೀಶ್ ಗೌಡ ಸಂರಕ್ಷಣಾ ಕಾಮಗಾರಿಗೆ ಚಾಲನೆ ನೀಡಿದ್ದರು.
ದೊಡ್ಡ ಗಡಿಯಾರದ ಇತಿಹಾಸ: ದೊಡ್ಡ ಗಡಿಯಾರವನ್ನು ಸಿಲ್ವರ್ ಜ್ಯುಬಿಲಿ ಕ್ಲಾಕ್ ಟವರ್ ಎಂದು ಕರೆಯಲಾಗುತ್ತದೆ. 1927ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಕ್ಕೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅರಮನೆ ನೌಕರರು ಮತ್ತು ಅಧಿಕಾರಿಗಳು ಹಣ ಸಂಗ್ರಹಿಸಿ ದೊಡ್ಡಗಡಿಯಾರ ನಿರ್ಮಾಣ ಮಾಡಿದರು. ಗಡಿಯಾರ ಗೋಪುರ ಚೌಕಾಕಾರದಲ್ಲಿ ನಿರ್ಮಾಣಗೊಂಡಿದ್ದು, 22.85 ಮೀಟರ್ ಎತ್ತರ ಹೊಂದಿದೆ. ಕಟ್ಟಡದ ಮೇಲ್ಭಾಗದಲ್ಲಿ ನಾಲ್ಕೂ ಕಡೆ 5 ಅಡಿ ವ್ಯಾಸದ ಗಡಿಯಾರಗಳಿವೆ. ಕಟ್ಟದ ತುದಿಯಲ್ಲಿ ರಜಪೂತ್ (ರಾಜಸ್ತಾನಿ) ಮಾದರಿಯ ಛತ್ರಿ ವಿನ್ಯಾಸ ಮತ್ತು ಗುಮ್ಮಟವಿದೆ.
1990ರವರೆಗೂ ಗಡಿಯಾರದ ಘಂಟಾನಾದ ಐದು ಕಿ.ಮೀ.ವರೆಗೂ ಕೇಳಿಸುತ್ತಿತ್ತು. ಸುಮಾರು 5.5 ಅಡಿ ಎತ್ತರವಿರುವ ಕಂಚಿನ ಗಂಟೆ ಪ್ರತಿ ಗಂಟೆಗೊಮ್ಮೆ ಶಬ್ದ ಮಾಡುತ್ತಿತ್ತು. ಈ ಗಂಟೆಯಿಂದ ಬಿರುಕು ಮೂಡುತ್ತಿದೆ ಎಂಬ ಅನುಮಾನದ ಮೇರೆಗೆ ಗಂಟೆಯ ಶಬ್ದವನ್ನು ಸ್ಥಗಿತಗೊಳಿಸಲಾಯಿತು. ಗಂಟೆಯ ಶಬ್ದವನ್ನು ನಿಲ್ಲಿಸಿದರೂ ಸಹ ಗಡಿಯಾರದ ಗೋಪುರದಲ್ಲಿ ಬಿರುಕುಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದು, ಮುಂದೆನಾಗುವುದೋ ಎಂಬ ಆತಂಕ ಪ್ರಾರಂಭವಾಗಿದೆ.
ಕಳ್ಳರ ಕಾಟ: ದೊಡ್ಡಗಡಿಯಾರ ಕಳ್ಳರ ಕಾಟವನ್ನು ಸಹ ಎದುರಿಸುತ್ತಿದೆ. ಸಿಡಿಲು ಬಡಿಯುವ ಸಂದರ್ಭ ಕಟ್ಟಡಕ್ಕೆ ಯಾವುದೇ ರೀತಿಯ ಹಾನಿ ಉಂಟಾಗದಂತೆ ತಡೆಯಲು ಅರ್ಥಿಂಗ್ ವಯರ್‌ಅನ್ನು ಅಳವಡಿಸಲಾಗಿತ್ತು. ಆದರೆ, ಇತ್ತೀಚೆಗೆ ಕಳ್ಳರು ಅರ್ಥಿಂಗ್ ವಯರ್‌ಅನ್ನು ಕಳವು ಮಾಡಿದ್ದಾರೆ. ಈ ಪಾರಂಪರಿಕ ದೊಡ್ಡಗಡಿಯಾರವನ್ನು ಸಂರಕ್ಷಣೆ ಮಾಡಲು ಭದ್ರತೆಗೆ ಸಿಬ್ಬಂದಿಯನ್ನು ನಿಯೋಜಿಸುವ ಅವಶ್ಯಕತೆ ಇದೆ. ಇಲ್ಲವಾದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಇನ್ನು ಮುಂದೆ ರೀತಿಯ ಕಳವು ಆಗದಂತೆ ನೋಡಿಕೊಳ್ಳುವ ಅವಶ್ಯಕತೆ ಇದೆ.
ಪಾರಂಪರಿಕ ಕಟ್ಟಡಗಳು ಉಳಿಯಲಿ: ಭವ್ಯ ಪರಂಪರೆಯಿಂದಲೇ ವಿಶ್ವದ ಗಮನ ಸೆಳೆದ ನಗರ ಮೈಸೂರು. ಆದರೆ, ಇತ್ತೀಚಿನ ವರ್ಷಗಳಲ್ಲಿ ನಗರದ ಪಾರಂಪರಿಕ ಕಟ್ಟಡ ಗಳು ಸರ್ಕಾರದ ನಿರ್ಲಕ್ಷೃಕ್ಕೆ ಗುರಿಯಾಗುತ್ತಾ ಬಂದಿದೆ. ಕಾಲಕಾಲಕ್ಕೆ ದುರಸ್ತಿ ಕಾಮಗಾರಿ ಕೈಗೊಳ್ಳಲು ವಿಳಂಬ ನೀತಿ ಅನುಸರಿಸುತ್ತಿರುವ ಪರಿಣಾಮ ನಗರದಲ್ಲಿ ಸಾಕಷ್ಟು ಪಾರಂಪರಿಕ ಕಟ್ಟಡಗಳು ದುಸ್ಥಿತಿಗೆ ತಲುಪಿದ್ದು, ಅದರಲ್ಲಿ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‌ಡೌನ್ ಕಟ್ಟಡ ಪ್ರಮುಖವಾಗಿದೆ. ಕಾಲ ಕಾಲಕ್ಕೆ ಪಾರಂಪರಿಕ ಕಟ್ಟಡಗಳ ದುರಸ್ತಿ ಕಾಮಗಾರಿ ಕೈಗೊಳ್ಳದ ಹಿನ್ನೆಲೆಯಲ್ಲಿ ಪಾರಂಪರಿಕ ಕಟ್ಟಡಗಳು ದುಸ್ಥಿತಿಗೆ ತಲುಪುತ್ತಿವೆ. ದೊಡ್ಡ ಗಡಿಯಾರದ ಮಾದರಿಯಲ್ಲಿ ಉಳಿದ ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಕಾರ್ಯ ನಡೆಯಬೇಕಾಗಿದೆ.
ದೊಡ್ಡಗಡಿಯಾರದ ಗೋಪುರದ ಸಂರಕ್ಷಣಾ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಈ ಬಗ್ಗೆ ನಗರ ಪಾಲಿಕೆ ಅಧಿಕಾರಿಗಳ ಗಮನ ಸೆಳೆದು ಬಿಲ್ ತಡೆ ಹಿಡಿಯುವಂತೆ ನಿರ್ದೇಶನ ನೀಡಲಾಗಿದೆ. ಕಾಮಗಾರಿಯನ್ನು ಸಮರ್ಪಕವಾಗಿ ಪೂರ್ಣಗೊಳಿಸಿದ ನಂತರವಷ್ಟೇ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗಲಿದೆ. ದೊಡ್ಡಗಡಿಯಾರದ ಗೋಪುರದಲ್ಲಿದ್ದ 3 ಗೊಮ್ಮಟಗಳನ್ನು ಕಿತ್ತೆಸೆದು ಹಾನಿ ಮಾಡಲಾಗಿದೆ. ಕೂಡಲೇ ಅದರ ಸಂರಕ್ಷಣಾ ಕಾರ್ಯ ಕೈಗೊಳ್ಳಲು ನಿರ್ದೇಶಿಸಲಾಗಿದೆ.
ಎನ್.ಎಸ್. ರಂಗರಾಜು, ಸದಸ್ಯ, ಜಿಲ್ಲಾ ಪಾರಂಪರಿಕ ಸಮಿತಿ