ಪಡಿತರ ವಿತರಣೆಯಲ್ಲಿ ಲೋಪ, ನ್ಯಾಯಬೆಲೆ ಅಂಗಡಿಗಳಿಗೆ ಶಾಪ

3
Published on

ತುಮಕೂರು: ಜಿಲ್ಲೆಯ 1087 ನ್ಯಾಯಬೆಲೆ ಅಂಗಡಿಗಳ ಪೈಕಿ ಬಹುತೇಕ ಕಡೆ ವಿತರಣೆಯಲ್ಲಿ ಲೋಪಗಳಾಗುತ್ತಿರುವ ದೂರು ಹೆಚ್ಚಾಗುತ್ತಿದೆ. ಜನಪ್ರತಿನಿಧಿಗಳು, ಸಾರ್ವಜನಿಕರಿಂದ ತಹಸೀಲ್ದಾರ್​ಗಳಿಗೆ ದೂರುಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲು ಕಂದಾಯ ಇಲಾಖೆ ಮುಂದಾಗಿದೆ. ಚಿಕ್ಕನಾಯಕನಹಳ್ಳಿ ತಹಸೀಲ್ದಾರ್​ ತೇಜಸ್ವಿನಿ ತಾಲೂಕಿನ ಎಲ್ಲ ಅಂಗಡಿಗಳಿಗೆ ನೋಟಿಸ್​ ಜಾರಿ ಮಾಡಿದ್ದು ಮುನ್ನುಡಿ ಬರೆದಿದ್ದಾರೆ.

ಪ್ರತಿ ತಿಂಗಳು ಪಡಿತರ ವಿತರಣೆ ಸಂದರ್ಭದಲ್ಲಿ ಬಯೋಮೆಟ್ರಿಕ್​ ಪಡೆಯುವ ನೆಪದಲ್ಲಿ ಕಾರ್ಡ್​ಗೆ 10ರಿಂದ 20ರೂ. ವರೆಗೆ ವಸೂಲಿ ಮಾಡುತ್ತಿದ್ದರೂ ಆಹಾರ ಇಲಾಖೆ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿರುವುದು ಜನರಲ್ಲಿ ಬೇಸರ ಮೂಡಿಸಿದೆ.

ಅಕ್ಕಿ ಜತೆಗೆ ರಾಗಿ ಮಿಶ್ರಣ ಮಾಡಿ ವಿತರಿಸುವ ಮೂಲಕ ಹಂಚಿಕೆಯಲ್ಲಿಯೂ ಮೋಸ ಮಾಡಲಾಗುತ್ತಿದೆ. ಮುಕ್ತ ಮಾರುಕಟ್ಟೆ ವಸ್ತುಗಳಾದ ಸೋಪು, ಅಡುಗೆ ಎಣ್ಣೆ, ಉಪ್ಪು ಮತ್ತಿತರ ವಸ್ತುಗಳನ್ನು ಬಲವಂತವಾಗಿ ಮಾರಾಟ ಕೂಡ ವ್ಯಾಪಕವಾಗಿದ್ದು ಆಹಾರ ಇಲಾಖೆ ಕ್ರಮಕೈಗೊಳ್ಳಬೇಕಿದೆ.

ಸಾಕಷ್ಟು ಲೋಪಗಳನ್ನು ಸರಿಪಡಿಸಿಕೊಳ್ಳಲು ಚಿಕ್ಕನಾಯಕನಹಳ್ಳಿ ತಹಸೀಲ್ದಾರ್​ ಜು.21ರಂದು ನೀಡಿರುವ ಸೂಚನೆಯಂತೆ ಎಲ್ಲ ತಹಸೀಲ್ದಾರ್​ಗಳು ಕ್ರಮಜರುಗಿಸಬೇಕಿದೆ. ಸೂಚನೆ ಕೇವಲ ಪತ್ರಕ್ಕೆ ಸೀಮಿತವಾಗದೆ ತಪ್ಪಿತಸ್ಥರಿಗೆ ಬಿಸಿಮುಟ್ಟಿಸುವ ಕೆಲಸ ಕೂಡ ಆಗಬೇಕಿದೆ.

ಹೊಸ ನ್ಯಾಯಬೆಲೆ ಅಂಗಡಿಗೆ ಅರ್ಜಿ: ತಿಪಟೂರು ತಾಲೂಕಿನ ಗೌಡನಕಟ್ಟೆ, ಹೊನ್ನೇನಹಳ್ಳಿ, ಬಿದರೆಗುಡಿ ಗ್ರಾಮಗಳಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಆಹಾರ ಇಲಾಖೆ ಅರ್ಜಿ ಆಹ್ವಾನಿಸಿದೆ. ಮಾಹಿತಿಗೆ ಜಂಟಿ ನಿರ್ದೇಶಕ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ನಂ&205, ಮಿನಿ ವಿಧಾನಸೌಧ. ಇವರನ್ನು ಸಂಪರ್ಕಿಸಬಹುದು.

ಸಾರ್ವಜನಿಕರ ಪ್ರಮುಖ ದೂರುಗಳೇನು?

  • ಬಯೋಮೆಟ್ರಿಕ್​ಗೆ 10 ರಿಂದ 20 ರೂ. ಸಂಗ್ರಹ
  • ಬೆಳಗ್ಗೆ 7ರಿಂದ 12, ಸಂಜೆ 4ರಿಂದ 8ರ ವರೆಗೆ ಬಾಗಿಲು ತೆರೆಯದಿರುವುದು
  • ಅಕ್ಕಿ ಜತೆ ರಾಗಿ ಮಿಶ್ರಣ ಮಾಡಿ ವಿತರಣೆ
  • ವಿತರಣೆ ವಿಳಂಬ ಮಾಡುವುದು
  • ತಿಂಗಳು ಪೂರ್ತಿ ವಿತರಿಸದೆ ಮೂರ್ನಾಲ್ಕು ದಿನ ಮಾತ್ರ ವಿತರಣೆ.
  • ತೂಕದಲ್ಲಿ ಮೋಸ
  • ಜನರೊಂದಿಗೆ ಅನುಚಿತವಾಗಿ ವರ್ತಿಸುವುದು

ಜಿಲ್ಲೆಯ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಪರಿತರ ವಿತರಣೆಯಲ್ಲಿ ಲೋಪಗಳಾಗುತ್ತಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ಅಧಿಕಾರಿಗಳು ಭೇಟಿ ನೀಡಿ ವರದಿ ಕೂಡ ನೀಡಲಿದ್ದಾರೆ. ತಪ್ಪುಗಳು ಕಂಡುಬಂದರೆ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು.

-ಮಂಟೇಸ್ವಾಮಿ ಜಂಟಿ ನಿರ್ದೇಶಕ, ಆಹಾರ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net