ಅರೆಭಾಷೆಯಲ್ಲಿನ ಹಳೆಯ ಪದ, ನುಡಿಗಟ್ಟುಗಳು ಮರೆಯಾಗುತ್ತಿದೆ

aati habba
Published on

ಮಡಿಕೇರಿ: ಕೊಡಗು ಗೌಡ ಮಹಿಳಾ ಒಕ್ಕೂಟ ಮಡಿಕೇರಿ ಇವರ ವತಿಯಿಂದ ೪ನೇ ವರ್ಷದ ಆಟಿ ಹಬ್ಬ ಮಡಿಕೇರಿ ಗೌಡ ಸಮಾಜದ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಕೋಳುಮುಡಿಯನ ಪ್ರೇಮ, ಡಾ.ಕೋರನ ಸರಸ್ವತಿ, ತೋಟಂಬೈಲು ಪಾರ್ವತಿ, ಕುಲ್ಲಚನ ಜ್ಯೋತಿ ಇವರುಗಳು ಆಟಿ ಪಾಯಸ ತಿನ್ನುವುದರ ಮೂಲಕ ಸಾಂಪ್ರದಾಯಕ ಅಡುಗೆಗಳ ಪ್ರದರ್ಶನ ವಿಭಾಗಕ್ಕೆ ಚಾಲನೆ ನೀಡಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಮೆ ದಮಯಂತಿ ಇವರು ಅಧ್ಯಕ್ಷತೆ ವಹಿಸಿದ್ದರು.

ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಬಾರಿಕೆ ದಿನೇಶ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಮಡಿಕೇರಿ ಗೌಡ ಸಮಾಜದ ಉಪಾಧ್ಯಕ್ಷ ಸೂರ್ತಲೆ ಸೋಮಣ್ಣ, ಸಾಹಿತಿ ಬಾರಿಯಂಡ ಜೋಯಪ್ಪ, ಗೌಡ ವಿದ್ಯಾ ಸಂಘದ ಉಪಾಧ್ಯಕ್ಷ ನಿವೃತ್ತ ಡಿ.ಐ.ಜಿ.ಅಮೆ ಸೀತಾರಾಮ್, ನಿವೃತ್ತ ಶಿಕ್ಷಕಿ ಶಿವದೇವಿ ಅವನಿಶ್ಚಂದ್ರ, ಕಾಫಿ ಬೆಳೆಗಾರರಾದ ತೋಟಂಬೈಲು ಪಾರ್ವತಿ, ಕೂಡಕಂಡಿ ಓಂಶ್ರೀ ದಯಾನಂದ ಉಪಸ್ಥಿತರಿದ್ದರು.

ಸಭೆಯಲ್ಲಿ ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಬಾರಿಯಂಡ ಜೋಯಪ್ಪ, ಕೊಡಗಿನ ಗೌರಮ್ಮ ಪ್ರಶಸ್ತಿ ಪುರಸ್ಕೃತರಾದ ಓಂಶ್ರೀ ದಯಾನಂದ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾರಿಯಂಡ ಜೋಯಪ್ಪ, ಅರೆಭಾಷೆಯಲ್ಲಿನ ಹಳೆಯ ಪದಗಳು ಹಾಗೂ ನುಡಿಗಟ್ಟುಗಳು ಮರೆಯಾಗುತ್ತಿದ್ದು, ಮುಂದಿನ ಪೀಳಿಗೆಯವರಿಗೆ ಇದನ್ನು ತಿಳಿಸುವ ಕೆಲಸವಾಗಬೇಕೆಂದರು.

ಬಾರಿಕೆ ದಿನೇಶ್ ಕುಮಾರ್ ಮಾತನಾಡಿ, ಆಟಿ ಹಬ್ಬವು ತನ್ನ ಬಾಲ್ಯದ ದಿನಗಳನ್ನು ನೆನಪಿಸಿತೆಂದು ಹೇಳಿದರಲ್ಲದೆ, ಜನರಲ್ಲಿ ಒಗ್ಗಟ್ಟು ಮೂಡಿಸಲು ಇಂತಹ ಹಬ್ಬಗಳು ಸಹಕಾರಿ ಯಾಗುತ್ತದೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಾಹಿತಿ ಕಟ್ರತನ ಲಲಿತಾ ಅಯ್ಯಣ್ಣ ಇವರು ಬರೆದಿರುವ ಕಾದಂಬರಿ ಕವಲುಗಳು ಕಲೆತಾಗ ಇದನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಬಿಡುಗಡೆ ಗೊಳಿಸಿದರು. ಒಕ್ಕೂಟದ ಸದಸ್ಯೆಯರು ಆಟಿ ಹಬ್ಬದ ವಿವಿಧ ವಿಶೇಷ ತಿನಿಸುಗಳನ್ನು ಮಾಡಿ ತಂದು ಸಂಭ್ರಮದಿಂದ ಪಾಲ್ಗೊಂಡಿದ್ದರು.

ಸಮಾರಂಭದಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿವಿಧ ಆಟೋಟಗಳನ್ನು ಏರ್ಪಡಿಸಲಾಗಿತ್ತು. ಆಟಿ ಸೊಪ್ಪಿನ ಪಾಯಸ, ಹಲ್ವಾ, ಕಡಬು, ಮರಕೆಸದ ಪತ್ರೊಡೆ, ಕಣಲೆ ಸಾರು, ಚಗತೆ ಸೊಪ್ಪಿನ ಪಲ್ಯ, ಪಕೋಡ, ಹಲಸಿನ ಹಣ್ಣಿನ ಕೂಗಲೆ ಹಿಟ್ಟು ಮುಂತಾದ ಖಾದ್ಯಗಳು ವಿಶೇಷವಾಗಿದ್ದವು. ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಒಕ್ಕೂಟದ ಸದಸ್ಯರು ಸೇರಿ ಮುನ್ನೂರಕ್ಕೂ ಹೆಚ್ಚಿನ ಜನರು ಭಾಗವಹಿಸಿದ್ದರು.

ಸಭೆಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಕಟ್ರತನ ಲಲಿತಾ ಅಯ್ಯಣ್ಣ, ಬಾರನ ಶೋಭಾ, ಕುದುಪಜೆ ರೋಹಿಣಿ, ಕೋಳಿಬೈಲು ಹರಿಣಿ, ಕರ್ಣಯನ ಪದ್ಮಿನಿ, ಮುದ್ಯನ ಜ್ಯೋತಿ, ಪೆರಿಯನ ಮುತ್ತಮ್ಮ, ಮೂಲೆಮಜಲು ಅಮಿತಾ, ನಾರೊಳನ ಭಾಗೀರಥಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net