

ಮೈಸೂರು: ರಾಜ್ಯದಲ್ಲಿಯೇ ಎರಡನೇ ಅತಿ ದೊಡ್ಡ ಜಲಸಂಗ್ರಹಗಾರ ಹಳೇ ಉಂಡುವಾಡಿ ನೀರು ಸರಬರಾಜು ಯೋಜನೆ ಮುಂದಿನ ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಕೆಆರ್‌ಎಸ್ ಹಿನ್ನೀರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಹಳೇ ಉಂಡುವಾಡಿ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಭಾನುವಾರ ವೀಕ್ಷಿಸಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಕೆಆರ್‌ಎಸ್ ಹಿನ್ನೀರಿನಲ್ಲಿ ಸುಮಾರು 595 ಕೋಟಿ ರೂ. ವೆಚ್ಚದಲ್ಲಿ ಯೋಜನೆ ನಿರ್ಮಿಸಲಾಗುತ್ತಿದೆ. ಹಿನ್ನೀರಿನಲ್ಲಿ ಜಾಕ್‌ವೆಲ್ ಕಂ ಪಂಪ್‌ಹೌಸ್, ಸ್ವಿಲ್ಲಿಂಗ್, ಬೇಸಿನ್, ಭಾಗಶಃ ಡ್ರಾಟ್ ಕೆನಾಲ್‌ಗೆ ಮಣ್ಣು ಅಗೆತದ ಕೆಲಸ ನಡೆಯುತ್ತಿದ್ದು, ಜಾಕ್‌ವೆಲ್ ಕಂ ಪಂಪ್‌ಹೌಸ್, ಸ್ವೀನಿಂಗ್ ವಾಲ್‌ನ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು.
ವಿದ್ಯುತ್ ಫೀಡರ್ ಲೈನ್, ಯೋಜನೆಯಡಿ 21.05 ಕಿ.ಮೀ. ಉದ್ದದ ಕೊಳವೆ ಒದಗಿಸುವ ಕಾರ್ಯ ಆಗಬೇಕಿದೆ. 18 ಕಿ.ಮೀ. ಪೈಪ್‌ಲೈನ್ ಅಳವಡಿಸಲಾಗಿದ್ದು, ಉಳಿದ ಕಾಮಗಾರಿ ಆಗಬೇಕಿದೆ. ಚಿಕ್ಕನಹಳ್ಳಿ, ಮೈದನಹಳ್ಳಿ ರೈತರಲ್ಲಿ ಭೂ ದಾಖಲೆ ತೊಂದರೆ ಇದ್ದು, ಕಾಮಗಾರಿ ಮಂದಗತಿಯಾಗಿದೆ. ದಾಖಲೆ ಸರಿಪಡಿಸಿದ ಬಳಿಕ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದರು.
ಈ ಯೋಜನೆಯಿಂದ ವಿಜಯನಗರದ ಕೇಂದ್ರ ಬೃಹತ್ ಜಲಸಂಗ್ರಹಗಾರಕ್ಕೆ ಸಂಪರ್ಕ ಕಲ್ಪಿಸಿ ಚಾಮರಾಜ, ಕೃಷ್ಣರಾಜ, ಯಾದವಗಿರಿ ಕೇಂದ್ರದ ಮೂಲಕ ಚಾಮರಾಜ, ಕೃಷ್ಣರಾಜ ಹಾಗೂ ನರಸಿಂಹರಾಜ ಕ್ಷೇತ್ರಗಳಿಗೆ ನೀರು ಪೂರೈಸಲಾಗುವುದು ಎಂದರು.
ಅಲ್ಲದೆ ಅಮೃತ್ ಯೋಜನೆಯಡಿ ಚಾಮುಂಡೇಶ್ವರಿ ಕ್ಷೇತ್ರದ ಗ್ರಾಮಗಳು, ಹೂಟಗಳ್ಳಿ, ಬೋಗಾದಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಡಾವಣೆಗಳು, ವಿಜಯನಗರ 3 ಹಾಗೂ 4ನೇ ಹಂತ, ಸುತ್ತಮುತ್ತಲಿನ ಬಡಾವಣೆಗಳಿಗೆ ನೀರು ದೊರೆಯಲಿದೆ. ಅಲ್ಲದೆ ಒಟ್ಟಾರೆ 276 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಆಗಲಿದೆ. ಕಬಿನಿ ಹಾಗೂ ಕಾವೇರಿ ನೀರು ಸರಬರಾಜಿನಿಂದ ನಗರದ 950 ಬಡಾವಣೆಗಳಿಗೆ ನೀರು ದೊರೆತಂತಾಗುತ್ತದೆ ಎಂದು ತಿಳಿಸಿದರು.
ಬಾಕಿ ಮನ್ನಾ ಪ್ರಸ್ತಾಪವಿಲ್ಲ
ನಗರದಲ್ಲಿ ಸರಬರಾಜು ಆಗುವ ಕುಡಿಯುವ ನೀರಿನ ಬಾಕಿ ಉಳಿಸಿಕೊಂಡಿರುವವರಿಗೆ ಬಾಕಿ ಅಥವಾ ಬಡ್ಡಿ ಮನ್ನಾ ಮಾಡುವ ಪ್ರಸ್ತಾಪ ಇಲ್ಲ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದರು.
ಸ್ಥಳೀಯ ಸಂಸ್ಥೆಗಳು ಸಂಪನ್ಮೂಲ ಕ್ರೋಡೀಕರಿಸಿಕೊಂಡು ಹೋಗಬೇಕಿದೆ. ಹಾಗಾಗಿ ಬಡ್ಡಿ ಅಥವಾ ಬಾಕಿ ಮನ್ನಾ ಮಾಡುವುದು ಕಷ್ಟಸಾಧ್ಯ. ಹಾಗಾಗಿ ಅಂತಹ ಪ್ರಸ್ತಾವನೆ ಇಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು.
ಬಾಕಿಯನ್ನು ಕಂತಿನ ರೂಪದಲ್ಲಿ ಸಂಗ್ರಹಿಸುವ ಕುರಿತು ನಗರಪಾಲಿಕೆ ಸ್ಥಳೀಯವಾಗಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಬಹುದು. ನಗರದಲ್ಲಿ ಸದ್ಯ 13 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಹೊರ ವಲಯದ ಬಡಾವಣೆಗಳು ಅಭಿವೃದ್ಧಿಗೊಂಡರೆ ಜನಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ಹಾಗಾಗಿ ಮೂಲಸೌಲಭ್ಯವಾದ ಕುಡಿಯುವ ನೀರು ನೀಡುವ ಯೋಜನೆಗಳನ್ನು ಸರ್ಕಾರ ಕೈಗೆತ್ತಿಕೊಂಡಿದೆ ಎಂದರು.
ಅನಧಿಕೃತ ನಲ್ಲಿ ಸಂಪರ್ಕಗಳಿಗೆ ಕಡಿವಾಣ ಹಾಕುವ ಜತೆಗೆ ನೀರು ವ್ಯರ್ಥವಾಗದಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಗರಪಾಲಿಕೆ ಮಾಡಬೇಕಿದೆ. ನೀರಿನ ಸುಂಕ ಬಾಕಿ ಉಳಿಸಿಕೊಂಡವರಿಂದ ವಸೂಲಿ ಅಭಿಯಾನ ಕೂಡ ನಡೆಸಬೇಕಿದೆ ಎಂದು ಸಲಹೆ ನೀಡಿದರು.