

ಹುಬ್ಬಳ್ಳಿ: ಶಾಲೆಯೊಂದರ ಹಳೇ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಭವಿಷ್ಯತ್ತಿಗಾಗಿ ಏನೆಲ್ಲ ಮಾಡಬಹುದು ಎಂಬುದನ್ನು ನಗರದ ಶ್ರೀ ಜಗದ್ಗುರು ಗಂಗಾಧರ ಪ್ರೌಢಶಾಲೆಯಲ್ಲಿ ಮಾಡಿ ತೋರಿಸಿದ್ದಾರೆ. ಸಮರ್ಪಣಾ ಭಾವ ಇದ್ದರೆ ಮಾತ್ರ ಇಂತಹ ಮನೋಭಾವ ಉಂಟಾಗಲು ಸಾಧ್ಯ ಎಂದು ಮೂರಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಇಲ್ಲಿಯ ಮೂರುಸಾವಿರ ಮಠ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಶ್ರೀ ಜಗದ್ಗುರು ಗಂಗಾಧರ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು "ಚಿಗುರಿದ ಕನಸು' ನವೀಕರಣ ಮಾಡಿದ ಶಾಲೆ ಕಟ್ಟಡ, ಸಕಲ ಸೌಲಭ್ಯಗಳ ಸಮರ್ಪಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಎಲ್ಲ ಕಡೆ ಗುರುವಂದನೆ ಮಾಡುವ ವಿದ್ಯಾರ್ಥಿಗಳನ್ನು ನೋಡಿದ್ದೇವೆ. ಇಲ್ಲಿ ಕಲಿತ ಶಾಲೆಗೆ ವಂದನೆ ಹೇಳುವ ಜತೆಗೆ ಇದೇ ಮೊದಲ ಬಾರಿ ಶಾಲೆ ಕಟ್ಟಡ ನವೀಕರಣ ಮಾಡಿರುವುದು ವಿಶೇಷ ಎಂದು ಹೇಳಿದರು.
ಬಸವಣ್ಣನವರು ಹೇಳಿದಂತೆ ದುಡಿದ ಹಣದಲ್ಲಿ ಸ್ವಲ್ಪ ಭಾಗ ದಾನ ಮಾಡು ಎಂಬಂತೆ ತಾವೆಲ್ಲ ಹಳೆಯ ವಿದ್ಯಾರ್ಥಿಗಳು ಈ ಶಾಲೆಯ ನವೀಕರಣ ಮಾಡಿ ಶಿಕ್ಷಣ ಕ್ರಾಂತಿ ಮಾಡಿದ್ದೀರಿ. ಕನ್ನಡ ಉಳಿಸುವ ಮಹತ್ತರ ಕೆಲಸ ಇದಾಗಿದೆ. ತಮ್ಮಸೇವಾ ಕಾರ್ಯ ಶ್ರೀಮಠ ಸದಾ ಸ್ಮರಿಸುತ್ತದೆ ಎಂದರು.
ಹಾವೇರಿ ಹುಕ್ಕೇರಿಮಠದ ಶ್ರೀಸದಾಶಿವ ಸ್ವಾಮೀಜಿ ಮಾತನಾಡಿ, ತಮ್ಮ ಶಿಷ್ಯ ವರ್ಗವು ಎತ್ತರ ಸ್ಥಾನಕ್ಕೆ ಬೆಳೆದಾಗ ಗುರುಗಳಲ್ಲಿ ಕಾಣುವ ಸಂತೃಪ್ತ ಭಾವ ಊಹಿಸಲಸಾಧ್ಯ. ಅಂತಹ ಶಿಷ್ಯರನ್ನು ಕಂಡಾಗ ಕಲಿಸಿದ ಗುರುವಿಗೆ ಅಭಿಮಾನ ಬರುತ್ತದೆ. ಶಿಕ್ಷಕರನ್ನು ಸ್ಮರಿಸಿ, ಸನ್ಮಾನಿಸುವ ಹಳೆಯ ವಿದ್ಯಾರ್ಥಿಗಳ ನಡುವಿನ ಸಂಬಂಧ ಅವಿನಾಭಾವ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಇದೇ ಶಾಲೆಯಲ್ಲಿ ಕಲಿತು ಉನ್ನತ ಮಟ್ಟಕ್ಕೆ ಬೆಳೆಯುವಲ್ಲಿ ಇಲ್ಲಿನ ಶಿಕ್ಷಕರ ಶ್ರಮವೂ ಇದೆ. ಈ ಶಾಲೆಯ ನೆನಪು ನನಗೆ ಸದಾ ಇರುತ್ತದೆ. ಗುರುಗಳು ಕಲಿಸಿದ ಪಾಠದಿಂದಾಗಿ ಒಬ್ಬ ಉತ್ತಮ ವಿದ್ಯಾರ್ಥಿಯಾಗಿ ಹೊರ ಹೊಮ್ಮಲು ಕಾರಣವಾಗಿದೆ. ಇಂದಿನ ಶಿಕ್ಷಣದ ಜೊತೆ ನೈತಿಕ ಮೌಲ್ಯಗಳು ಅವಶ್ಯವಾಗಿವೆ. ಈ ಶಾಲೆಗೆ ಇಂದು ವಿದ್ಯಾರ್ಥಿಯಾಗಿ ಬಂದಿದ್ದೇನೆ ಎಂದು ಅನುಭವ ಹಂಚಿಕೊಂಡರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಡಿ.ಜಿ. ಪುರೋಹಿತ, ತಾವು ಕಲಿತ ಶಾಲೆಯ ಬಗ್ಗೆ ಅಭಿಮಾನ ಇಟ್ಟುಕೊಂಡ ವಿದ್ಯಾರ್ಥಿಗಳು ಇಂದು ಆ ಶಾಲೆಯನ್ನು ಅಭಿವೃದ್ಧಿ ಪಡಿಸಿದ್ದು ಇತರರಿಗೆ ಮಾದರಿಯಾಗಿದೆ ಎಂದರು.
ಹಳೆಯ ವಿದ್ಯಾರ್ಥಿ ಉಮೇಶ ಚಿಕ್ಕಮಠ ಮಾತನಾಡಿ, ಅನ್ನದಾನ ಕ್ಷಣಿಕ. ವಿದ್ಯಾದಾನ ಜೀವನ ಪರ್ಯಂತ. ಈ ಶಾಲೆಯಿಂದ ಬದುಕು ಕಟ್ಟಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿಯೂ ಎಲ್ಲ ಬಗೆಯ ಅಭಿವೃದ್ಧಿಗೆ ಸಿದ್ಧರಾಗಿದ್ದೇವೆ ಎಂದರು.
ಸ್ಮರಣಿಕೆ ಬಿಡುಗಡೆ ಗೊಳಿಸಲಾಯಿತು. ಪ್ರೌಢಶಾಲೆಯ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಡಾ. ವೀರಣ್ಣ ಮುಧೋಳ ಅಧ್ಯಕ್ಷತೆ ವಹಿಸಿದ್ದರು.
ಮಲ್ಲಿಕಾರ್ಜುನ ಕಳಸರಾಯ, ಮುರಗೇಶ ಯಕಲಾಸಪುರ, ಲಿಂಗರಾಜ ಇಂಗಳಹಳ್ಳಿ, ಚನ್ನಬಸಪ್ಪ ಧಾರವಾಡಶೆಟ್ಟರ, ಮಹಾದೇವ ಬೂದಪ್ಪನವರ, ಬಸವರಾಜ ಯಕಲಾಸಪುರ, ವಿಜಯ ಮಲ್ಲಣ್ಣವರ ಇತರರಿದ್ದರು.
ಪ್ರಾಚಾರ್ಯ ಅಂಜಲಿ ಕರಬಸಣ್ಣವರ ಸ್ವಾಗತಿಸಿದರು. ಗುರು ಬನ್ನಿಕೊಪ್ಪ ನಿರೂಪಿಸಿದರು.