

ಗಂಗೊಳ್ಳಿ: ಪ್ರತಿಯೊಂದು ಶಾಲೆಗೆ ಹಳೇ ವಿದ್ಯಾರ್ಥಿಗಳು ಆಧಾರ ಸ್ತಂಭಗಳಾಗಿದ್ದು, ಪ್ರೀತಿ, ವಿಶ್ವಾಸವನ್ನಿಟ್ಟುಕೊಂಡು ತಮ್ಮಿಂದಾಗುವ ಸಹಕಾರ ನೀಡುವ ಮೂಲಕ ಶಾಲೆಯ ಅಭಿವೃದ್ಧಿಗೆ ಮುಂದಾಗಬೇಕು ಎಂದು ಕುಂದಾಪುರ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಾಬಣ್ಣ ಪೂಜಾರಿ ಹೇಳಿದರು.
ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಶಾಂತೇರಿ ಬಾ ರಂಗ ಮಂಟಪದಲ್ಲಿ ಭಾನುವಾರ ಗಂಗೊಳ್ಳಿಯ ಎಸ್.ವಿ. ಶಾಲೆಗಳ ಹಳೇ ವಿದ್ಯಾರ್ಥಿ ಸಂಘದ 55ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಗಂಗೊಳ್ಳಿ ಜಿಎಸ್‌ವಿಎಸ್ ಅಸೋಸಿಯೇಶನ್ ಸದಸ್ಯ ಕೆ.ರಾಮನಾಥ ಅಧ್ಯಕ್ಷತೆ ವಹಿಸಿದ್ದರು. ತ್ರಾಸಿಯ ಸೌಪರ್ಣಿಕಾ ವಿವಿಧೋದ್ದೇಶ ಮಹಿಳಾ ಸಹಕಾರಿ ಸಂಘ ನಿರ್ದೇಶಕಿ ಪ್ರಿಯದರ್ಶಿನಿ ದೇವಾಡಿಗ, ಸಾಫ್ಟ್‌ವೇರ್ ಇಂಜಿನಿಯರ್ ಗುರುಪ್ರಿತ್ ಕರ್ಣಿಕ್ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಎಚ್.ಭಾಸ್ಕರ ಶೆಟ್ಟಿ ಮತ್ತು ನಿವೃತ್ತ ಉಪಪ್ರಾಂಶುಪಾಲ ಉಮೇಶ್ ಕರ್ಣಿಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ರ‌್ಯಾಂಕ್ ಪಡೆದ ಹರ್ಷಿತಾ ಎಸ್. ಪೂಜಾರಿ, ನೇಹಾ ಎಸ್.ಕೊಡೇರಿ, ಇಂಚರ ಆರ್. ದೇವಾಡಿಗ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದ ದೀಕ್ಷಾ ವಿ. ಕಾಮತ್ ಅವರನ್ನು ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಮಿಥುನ್ ಎಂ.ಡಿ. ಬಿಜೂರು ಸ್ವಾಗತಿಸಿದರು. ಖಜಾಂಚಿ ಸುದನೇಶ ಶ್ಯಾನುಭಾಗ್ ವರದಿ ವಾಚಿಸಿದರು. ಬಿ.ಲಕ್ಷ್ಮೀಕಾಂತ ಮಡಿವಾಳ, ಬಿ.ಪ್ರಕಾಶ ಶೆಣೈ, ದೀಪಿಕಾ ಶ್ಯಾನುಭಾಗ್, ಮಮತಾ ಪೂಜಾರಿ ಮತ್ತು ಸಕು ಉದಯ ಸನ್ಮಾನಿತರನ್ನು ಪರಿಚಯಿಸಿದರು. ನಾಗರಾಜ ಕಲೈಕಾರ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಬಿ.ರಾಘವೇಂದ್ರ ಪೈ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಭಾಸ್ಕರ ಎಚ್.ಜಿ. ವಂದಿಸಿದರು.