

ಮಡಿಕೇರಿ:
ಡಿ. ಚೆನ್ನಮ್ಮ ಎಜುಕೇಶನ್ ಸೊಸೈಟಿಯ ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಸಂಭ್ರಮದಿAದ ಸೋಮವರ ನಡೆಯಿತು. ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಳೇ ವಿದ್ಯಾರ್ಥಿ ಎಂ.ಜಿ. ಬೋಪಣ್ಣ, ಈ ಶಿಕ್ಷಣ ಸಂಸ್ಥೆಯನ್ನು ಪ್ರಬಲವಾಗಿ ಕಟ್ಟಿ ಬೆಳೆಸುವಲ್ಲಿ ಹಿರಿಯರ ಶ್ರಮ ಸ್ಮರಿಸಿಕೊಂಡರು. ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಬಿ.ಎ. ನಾಣಿಯಪ್ಪ ಮಾತನಾಡಿ, ಅಂದಿನ ಕಾಲದಲ್ಲಿ 75 ಸಾವಿರ ರೂ. ವೆಚ್ಚದಲ್ಲಿ ಈ ಶಿಕ್ಷಣ ಸಂಸ್ಥೆಯ ಕಟ್ಟಡ ನಿರ್ಮಾಣವಾಗಿತ್ತು, ಸಂಸ್ಥೆಯ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಿಂದಲೇ ಇಂದಿಗೂ ಈ ಸಂಸ್ಥೆ ಸದೃಢವಾಗಿ ಮುನ್ನಡೆದಿದೆ ಎಂದರು.
ಹಳೇ ವಿದ್ಯಾರ್ಥಿ ವಕೀಲ ಕೆ.ಎಸ್. ರತನ್ ತಮ್ಮಯ್ಯ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನೆಲೆ ನಿಂತಿರುವ ಈ ಸಂಸ್ಥೆಯ ಸಾಧನೆ ನಾಡಿನ ಇತರ ಸಂಸ್ಥೆಗಳಿಗೂ ಮಾದರಿ ಎಂದರು. ಲೆಕ್ಕ ಪರಿಶೋಧಕ ಪಿ.ಡಬ್ಲ್ಯು. ಫ್ರಾನ್ಸಿಸ್ ಮಾತನಾಡಿ, ಮಕ್ಕಳಿಗೆ ಜೀವನದ ಸಂಕಷ್ಟಗಳ ಪರಿಚಯ ಇರಬೇಕು. ಆಗಲೇ ಉನ್ನತ ಸಾಧನೆಯತ್ತ ಗುರಿ ಕೂಡ ಇರುತ್ತದೆ ಎಂದು ಅಭಿಪ್ರಾಯಪಟ್ಟರು. ಕಾಫಿ ಬೆಳೆಗಾರ ಸಿ.ಪಿ. ಮುದ್ದಪ್ಪ, ಅರಣ್ಯ ಇಲಾಖೆಯ ಹಿರಿಯ ಸಹಾಯಕಿ ವಿಜಯಲಕ್ಷ್ಮಿ, ಕಾಫಿ ಬೆಳೆಗಾರ ಹೆಚ್.ಎಸ್. ಉತ್ತಯ್ಯ, ಉದ್ಯಮಿ ಬಿ.ವಿ. ವೆಂಕಪ್ಪ ಸಂಸ್ಥೆಯಲ್ಲಿ ಕಳೆದ ದಿನಗಳನ್ನು ಅವಲೋಕಸಿದರು.
ಸಂಸ್ಥೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಜಿ.ಬೋಪಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಕರ್ನಲ್ ಬಿ.ಜಿ.ವಿ. ಕುಮಾರ್, ಎಸ್.ಸಿ. ಮಾಲತಿ, ಗಣೇಶ್ ಹೆಚ್.ಎಸ್. ಪ್ರಾಂಶುಪಾಲ ಸಿ.ಜಿ.ಮಂದಪ್ಪ, ಪ್ರೌಡಶಾಲಾ ಮುಖ್ಯ ಶಿಕ್ಷಕಿ ಕೆ.ಯು. ರೀಟಾ, ಅನಿಲ್ ಹೆಚ್.ಟಿ., ಕೆ.ಎಸ್. ಅಶ್ವಿನಿ ಇದ್ದರು.
ಸಂಸ್ಥೆಯ ಶಿಕ್ಷಕಿಯರಿಂದ ಆಕರ್ಷಕ ನೃತ್ಯ ಗಮನ ಸೆಳೆಯಿತು. ಸಂಸ್ಥೆಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜಿಸಿದವು. ವಜ್ರಮಹೋತ್ಸವದ ಆಕರ್ಷಣೆಯಾಗಿ ಖಾಸಗಿ ಚಾನೆಲ್ ರಿಯಾಲಿಟಿ ಶೋ ಕಲಾವಿದರಾದ ಆರ್. ಮಹೇಂದ್ರ, ಪ್ರಿಯಾ ಕುಂದಾಪುರ, ಶಶಿ ಸಿಂಚನಾ ತಂಡದಿAದ ಹಾಡು ಮತ್ತು ನೃತ್ಯ ಕಾರ್ಯಕ್ರಮ ಮನಸೂರೆಗೊಂಡಿತ್ತು.