

ಶಿವಮೊಗ್ಗ: ರಾಜ್ಯ ಸರ್ಕಾರ ಹಳೇ ಪಿಂಚಣಿ ವ್ಯವಸ್ಥೆ(ಒಪಿಎಸ್)ಯನ್ನು ಮತ್ತೆ ಜಾರಿಗೆ ತರುವ ಇಂಗಿತ ವ್ಯಕ್ತಪಡಿಸಿದ್ದು ಹೊಸ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ರದ್ದಾಗಲಿದೆ. ಈ ಬಗ್ಗೆ ಸರ್ಕಾರ ಶೀಘ್ರದಲ್ಲೇ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ತಿಳಿಸಿದರು.
ಈ ಬಗ್ಗೆ ಮುಂದಿನ ಆಯವ್ಯಯದಲ್ಲೂ ಚರ್ಚಿಸಲಾಗುತ್ತಿದೆ. ಸರ್ಕಾರಿ ನೌಕರರಿಗೆ ಜಾರಿಗೆ ಬರುವಂತೆ ಅನುದಾನಿತ ಖಾಸಗಿ, ಅರೆ ಸರ್ಕಾರಿ ಸ್ವಯುತ್ತತೆ ಹೊಂದಿರುವ ಸರ್ಕಾರಿ ನೌಕರರಿಗೂ ಈ ಯೋಜನೆ ವಿಸ್ತಾರವಾಗಬೇಕಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
2006ರ ನಂತರ ನೌಕರಿ ಪಡೆದವರಿಗೆ ಇದು ಅನ್ವಯವಾಗುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಣಯ ತೆಗೆದುಕೊಂಡಿದೆ. 2005ರಲ್ಲಿ ನೋಟಿಫಿಕೇಶನ್ ಆಗಿ, ಪಟ್ಟಿಯೂ ಸಿದ್ಧವಿದ್ದು, 2006ರಲ್ಲಿ ನೌಕರಿ ನೀಡಿದ್ದರೆ ಅಂತಹವರಿಗೆ ಒಪಿಎಸ್ ಜಾರಿಯಾಗಲಿದೆ. ಈ ಅನುಕೂಲವನ್ನು ಅನುದಾನಿತ ಶಾಲೆಯ ನೌಕರರು ಕೂಡ ಪಡೆಯಬೇಕು. ಅನುದಾನ ಪಡೆಯುವ ಮೊದಲು ಹಲವು ವರ್ಷಗಳ ತನಕ ಅಲ್ಲಿ ಕೆಲಸ ಮಾಡಿದ್ದಾರೆ. ಹಾಗಾಗಿ ಒಪಿಎಸ್ ಜಾರಿಯಾದರೆ 11,500 ನೌಕರರಿಗೆ ಪ್ರಯೋಜನವಾಗುತ್ತದೆ ಎಂದು ಹೇಳಿದರು.
ಪ್ರಮುಖರಾದ ವೈ.ಎಚ್.ನಾಗರಾಜ್, ಧೀರರಾಜ್ ಹೊನ್ನವಿಲೆ, ಶಿ.ಜು.ಪಾಶ, ಹಿರಣ್ಣಯ್ಯ, ಲಕ್ಷ್ಮಣ್ಣಪ್ಪ,ಎಸ್.ಪಿ.ಪಾಟೀಲ್, ಕೃಷ್ಣ ಸುದ್ದಿಗೋಷ್ಠಿಯಲ್ಲಿದ್ದರು.
ನೈಋತ್ಯ ಪದವೀಧರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ
ನೈಋತ್ಯ ಪದವೀಧರ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದು ಟಿಕೆಟ್ ಸಿಗುವ ನಿರೀಕ್ಷೆ ಇದೆ. ಹಾಗಾಗಿ ಕ್ಷೇತ್ರದಲ್ಲಿ ತಕ್ಷಣದಿಂದಲೇ ಪ್ರವಾಸ ಮಾಡುತ್ತೇನೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ತಿಳಿಸಿದರು. ನೈಋತ್ಯ ಪದವೀಧರ ಕ್ಷೇತ್ರದಿಂದ ನನಗೆ ಟಿಕೆಟ್ ಸಿಗುತ್ತದೆ ಎಂಬ ಭರವಸೆ ಇದೆ. ರಾಜ್ಯದ ನಾಯಕರು ಈ ಸೂಚನೆ ನೀಡಿದ್ದಾರೆ. ಕ್ಷೇತ್ರದಲ್ಲಿ ಓಡಾಡುವಂತೆ ಸಲಹೆ ಕೊಟ್ಟಿದ್ದಾರೆ. ಅದರಂತೆ ಬುಧವಾರದಿಂದಲೇ ಕ್ಷೇತ್ರದಲ್ಲಿ ಓಡಾಡುತ್ತೇನೆ. ಕಳೆದ 42 ವರ್ಷಗಳಿಂದ ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿಲ್ಲ. ಈ ಬಾರಿ ಗೆದ್ದು ತೋರಿಸುತ್ತೇನೆಂದು ಟಿಕೆಟ್ ಆಕಾಂಕ್ಷಿಯೂ ಆದ ಆಯನೂರು ಮಂಜುನಾಥ ವಿಶ್ವಾಸ ವ್ಯಕ್ತಪಡಿಸಿದರು.