ಹಳೇ ಪಿಂಚಣಿ ವ್ಯವಸ್ಥೆ ಮತ್ತೆ ಜಾರಿ; ರಾಜ್ಯ ಸರ್ಕಾರ ಭರವಸೆ: ಸಿ.ಎಸ್.ಷಡಾಕ್ಷರಿ

6sgr3
ರಾಜ್ಯ ಸರ್ಕಾರಿ ನೌಕರರ ಸಾಗರ ಶಾಖೆ ಹಮ್ಮಿಕೊಂಡಿದ್ದ ನೌಕರಿಗೆ ಅಭಿನಂದನೆ, ನಿವೃತ್ತ ನೌಕರರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸಿ.ಎಸ್.ಷಡಾಕ್ಷರಿ ಉದ್ಘಾಟಿಸಿದರು. ಜಿ.ಪರಮೇಶ್ವರಪ್ಪ, ಚಂದ್ರಶೇಖರ ನಾಯ್ಕ, ಬಿ.ಎನ್.ಮಂಜುನಾಥ್ ಇತರರಿದ್ದರು.
Published on

ಸಾಗರ: ರಾಜ್ಯ ಸರ್ಕಾರ ಹಳೇ ಪಿಂಚಣಿ ವ್ಯವಸ್ಥೆ (ಒಪಿಎಸ್)ಯನ್ನೇ ಜಾರಿಗೆ ತರುವ ಭರವಸೆ ನೀಡಿದ್ದು ಹೊಸ ಪಿಂಚಣಿ ನೀತಿ ಪರಿಶೀಲನೆಗೆ ಸಮಿತಿಯನ್ನು ರಚಿಸಲಾಗಿದೆ. ಎನ್‌ಪಿಎಸ್ ನೌಕರರು ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ಜತೆ ರಾಜ್ಯ ಸರ್ಕಾರಿ ನೌಕರರ ಸಂಘವಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದರು.

ನೌಕರರ ಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಾಗರ ಶಾಖೆ ಹಮ್ಮಿಕೊಂಡಿದ್ದ ನೌಕರಿಗೆ ಅಭಿನಂದನೆ, ನಿವೃತ್ತ ನೌಕರರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ವೇತನ ಇತ್ಯಾದಿ ಸೌಲಭ್ಯ ನೀಡುವಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ. ಎನ್‌ಪಿಎಸ್ ನೌಕರರ ಬೇಡಿಕೆ ಸಹ ರಾಜ್ಯ ಸರ್ಕಾರ ಕೇಳಿದ್ದು ಅದು ಶೀಘ್ರದಲ್ಲಿಯೇ ಈಡೇರುವ ವಿಶ್ವಾಸವಿದೆ. ಸಂಘಟನೆ ನಿರಂತರವಾಗಿ ನೌಕರ ಪರವಾಗಿ ಕೆಲಸ ಮಾಡುತ್ತಿದೆ. ಸರ್ಕಾರದ ಹಂತದಲ್ಲಿ ಕೆಲಸ ಮಾಡಿಸುವುದು ಅಷ್ಟು ಸುಲಭವಲ್ಲ. ರಾಜ್ಯದಲ್ಲಿ 6 ಲಕ್ಷ ನೌಕರರು ಇದ್ದಾರೆ. ಸರ್ಕಾರ ಮತ್ತು ನೌಕರರ ನಡುವೆ ಸಮನ್ವಯತೆ ಸಾಧಿಸುವ ಕೆಲಸವನ್ನು ಸಂಘ ಪ್ರಾಮಾಣಿಕವಾಗಿ ಮಾಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಜಿ.ಪರಮೇಶ್ವರಪ್ಪ, ನೌಕರರ ಬೇಡಿಕೆಯನ್ನು ಸರ್ಕಾರದ ಹಂತದವರೆಗೂ ಒಯ್ದು ಅದನ್ನು ಬಗೆಹರಿಸುವ ಪ್ರಯತ್ನ ಅಧ್ಯಕ್ಷರು ಮಾಡುತ್ತಿದ್ದು, ನಾವು ಅವರಿಗೆ ಸಂಪೂರ್ಣ ಬೆಂಬಲ ನೀಡಬೇಕು. ಸಾಗರ ಶಾಖೆಯು ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡುತ್ತಿದ್ದು ಅದಕ್ಕೆ ನೌಕರರು ಆರ್ಥಿಕ ಸಹಕಾರ ನೀಡುವತ್ತ ಗಮನ ಹರಿಸಬೇಕು ಎಂದರು.
ತಹಸೀಲ್ದಾರ್ ಚಂದ್ರಶೇಖರ ನಾಯ್ಕ, ಸಹಾಯಕ ಕಾರ್ಯಪಾಲಕ ಅಭಿಯಂತರ ಬಿ.ಎನ್.ಮಂಜುನಾಥ್, ಬಿಇಒ ಪರಶುರಾಮ್, ಪ್ರಮುಖರಾದ ಜಿ.ಬಸವರಾಜ್, ಕೆ.ಬಿ.ಉಮೇಶ್, ವಿ.ಚಂದ್ರಶೇಖರ್, ಜಯಶೀಲ, ಲಕ್ಷ್ಮಣ್ ನಾಯ್ಕ್, ರಾಘವೇಂದ್ರ ಕುಮಾರ್, ಡಿ.ಕೆ.ಅಣ್ಣಪ್ಪ, ಎಲ್.ಎಂ.ಹೆಗಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net