

ಉಡುಪಿ: ನಗರದ ಚಿತ್ತರಂಜನ್ ಸರ್ಕಲ್ ಬಳಿ ಇರುವ 50 ವರ್ಷ ಹಳೆಯದಾದ ರಾಯಲ್ ಮಹಲ್ ಬಹುಮಹಡಿ ಕಟ್ಟಡದ ಪಾರ್ಶ್ವ ಶುಕ್ರವಾರ ಕುಸಿದಿದ್ದು, ಒಳಗಿದ್ದವರು ಸ್ವಲ್ಪದರಲ್ಲೇ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಶುಕ್ರವಾರ ಮಧ್ಯಾಹ್ನ ಕಟ್ಟಡ ಏಕಾಏಕಿ ಕುಸಿದು ಬಿದ್ದಿದೆ. ಕಟ್ಟಡ ಕುಸಿಯುತ್ತಿರುವ ಸದ್ದು ಕೇಳಿ ತಳಮಹಡಿಯಲ್ಲಿದ್ದ ಭಾರತೀಯ ಜನ ಔಷಧಿ ಕೇಂದ್ರ, ಹೋಟೆಲ್, ಚಿಪ್ಸ್ ಬೇಕರಿ ಅಂಗಡಿಯ ಸಿಬ್ಬಂದಿ ಹೊರಗಡೆ ಓಡಿ ಬಂದಿದ್ದಾರೆ. ಘಟನೆಯಲ್ಲಿ ಮಹಿಳೆಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮಣ್ಣಿನ ಕಟ್ಟಡ ಆಗಿದ್ದರಿಂದ ಇತ್ತೀಚಿನ ಮಳೆಯಿಂದ ತೇವಾಂಶ ಅಧಿಕವಾಗಿ ಕಟ್ಟಡ ಕುಸಿದಿರುವ ಸಾಧ್ಯತೆ ಇದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೆಡಿಕಲ್‌ನಲ್ಲಿದ್ದ ಸಾಮಗ್ರಿಗಳನ್ನು ಹೊರಗೆ ತಂದಿರಿಸಿದರು. ಕಟ್ಟಡ ಕುಸಿತದಿಂದ ಪಕ್ಕದಲ್ಲೇ ಇದ್ದ ಮೆಸ್ಕಾಂನ ಜಿಒಎಸ್ ಕಂಬಕ್ಕೆ ಹಾನಿಯಾಗಿದೆ. ಕಟ್ಟಡದ ಎದುರಿಗೆ ಟೆಂಪೋ ಸ್ಟಾೃಂಡ್ ಇದ್ದು, ಕಟ್ಟಡ ಕುಸಿಯುವ ವೇಳೆ ಟೆಂಪೋಗಳು ಅಲ್ಲಿರಲಿಲ್ಲ.
ಮಾಲೀಕರಿಗೆ ನೋಟಿಸ್: ಸ್ಥಳಕ್ಕೆ ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್ ಭೇಟಿ ನೀಡಿದರು. ಕಟ್ಟಡ 50 ವರ್ಷಕ್ಕಿಂತಲೂ ಹಳೆಯದಾಗಿದೆ. ಸದ್ಯ ಕಟ್ಟಡದ ಒಂದು ಭಾಗ ಕುಸಿದಿದ್ದು, ಉಳಿದ ಭಾಗವೂ ಕುಸಿಯುವ ಸಂಭವವಿದೆ. ಹಾಗಾಗಿ ಅದನ್ನು ಸಂಪೂರ್ಣ ನೆಲಸಮ ಮಾಡುವಂತೆ ಮಾಲೀಕರಿಗೆ ನೋಟಿಸ್ ನೀಡಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.
ಹಳೇ ಕಟ್ಟಡಗಳ ತೆರವು: ನಗರದಲ್ಲಿರುವ ಹಳೆಯ ಹಾಗೂ ನಿರ್ವಹಣೆ ಇಲ್ಲದ ಕಟ್ಟಡಗಳನ್ನು ಗುರುತಿಸಿ, ಕೂಡಲೇ ತೆರವು ಮಾಡುವಂತೆ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗುವುದು. ತಪ್ಪಿದಲ್ಲಿ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತರು ಎಚ್ಚರಿಕೆ ನೀಡಿದ್ದಾರೆ.