ಆಲಮೇಲದಲ್ಲಿ ವೃದ್ಧನ ಹತ್ಯೆ

Old man killed in Alamela
ಕಾಂತಪ್ಪ ವಿಬೂತಿಹಳ್ಳಿ
Published on

ಆಲಮೇಲ: ಬೈಕ್‌ಗೆ ದಾರಿ ಕೊಡುವ ವಿಷಯಕ್ಕೆ ಸಂಬಂಧಿಸಿದಂತೆ ಸವಾರರ ಮಧ್ಯೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ವೃದ್ಧನೊಬ್ಬನನ್ನು ಕೊಲೆ ಮಾಡಲಾಗಿದೆ. ಪಟ್ಟಣದ ಇಂಡಿ ರಸ್ತೆಯ ಕರ್ನಾಟಕ ಬ್ಯಾಂಕ್ ಹತ್ತಿರ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ.

ಆಲಮೇಲದ ಕಾಂತಪ್ಪ ವಿಬೂತಿಹಳ್ಳಿ(63) ಕೊಲೆಯಾದ ವೃದ್ಧ.

ಕೊಲೆಯಾದ ಕಾಂತಪ್ಪ ಹಾಗೂ ಆತನ ಮಗ ಗಾಲೀಬ ವಿಬೂತಿಹಳ್ಳಿ ಇಬ್ಬರೂ ಬೈಕ್ ಮೇಲೆ ತಮ್ಮ ತೋಟದಿಂದ ಆಲಮೇಲಕ್ಕೆ ಬರುತ್ತಿರುವಾಗ ಪಟ್ಟಣದ ಕರ್ನಾಟಕ ಬ್ಯಾಂಕ್ ಎದುರಿನ ಇಂಡಿ ರಸ್ತೆಯಲ್ಲಿ ಬೈಕ್ ಸೈಡ್ ತೆಗೆದುಕೊಳ್ಳುವ ವಿಷಯವಾಗಿ ಹಣ್ಣಿನ ವ್ಯಾಪಾರಿ ಅಜೀತ್ ನಂದರಗಿ ಜತೆ ಮಾತಿನ ಚಕಮಕಿ ನಡೆದಿದೆ. ಇದು ವಿಕೋಪಕ್ಕೆ ತಿರುಗಿ ಅಜೀತ್ ನಂದರಗಿ ತನ್ನ ಬೈಕ್‌ನಲ್ಲಿದ್ದ ಹಣ್ಣು ಕತ್ತರಿಸುವ ಚಾಕುವಿನಿಂದ ಕಾಂತಪ್ಪಗೆ ಚುಚ್ಚಿ ಪರಾರಿಯಾಗಿದ್ದಾನೆ.

ತೀವ್ರ ಗಾಯಗೊಂಡ ಕಾಂತಪ್ಪನನ್ನು ವಿಜಯಪುರದ ಬಿಎಲ್‌ಡಿಇ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಕಾಂತಪ್ಪ ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾನೆ. ಈ ಕುರಿತು ಆಲಮೇಲ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ ಭಗವಾನ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇಂಡಿ ಡಿಎಸ್‌ಪಿ ಜಗದೀಶ ನೇತೃತ್ವದಲ್ಲಿ ಸಿಂದಗಿ ಸಿಪಿಐ ಡಿ. ಹುಲುಗಪ್ಪ, ಆಲಮೇಲ ಪಿಎಸ್‌ಐ ಕುಮಾರ ಹಾಡಕಾರ, ಅಪರಾಧ ವಿಭಾಗದ ಪಿಎಸ್‌ಐ ಎನ್.ಜಿ. ಅಪನಾಯ್ಕರ ಹಾಗೂ ಸಿಬ್ಬಂದಿ ತಂಡ ರಚಿಸಿ ದುಷ್ಕರ್ಮಿ ಬಂಧನಕ್ಕೆ ಜಾಲ ಬೀಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net