ಚಿನ್ನದ ಸರ ಕಳವಾಯ್ತು ಅಂತ ಪೊಲೀಸರಿಗೆ ದೂರು; ಸಿಸಿಟಿವಿಯಿಂದ ಬಯಲಾಯ್ತು ಅಜ್ಜಿಯ ಅಸಲಿಯತ್ತು!

Gold Chain
Published on

ಬಂಟ್ವಾಳ (ದ.ಕ.): ಕಳ್ಳರು ಚಿನ್ನದ ಸರ ಎಳೆದೊಯಿದ್ದಾರೆ ಎಂದು ವೃದ್ಧೆ ನೀಡಿದ ದೂರಿನ ತನಿಖೆ ನಡೆಸಿರುವ ಬಂಟ್ವಾಳ ಪೊಲೀಸರು ಪ್ರಕರಣದ ಹಿಂದಿನ ಅಸಲಿಯತ್ತನ್ನು ಬಯಲಿಗೆಳೆದಿದ್ದಾರೆ.

ಬಂಟ್ವಾಳ ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟು ನಿವಾಸಿ ಶಾಂತ ನಾಯಕ್ ಜ.8ರಂದು ಪೇಟೆಗೆ ಹೋಗಿ ವಾಪಸ್ ಮನೆಗೆ ಬರುವಾಗ ಬೈಕಿನಲ್ಲಿ ಬಂದ ಇಬ್ಬರು ಅವರ ಕುತ್ತಿಗೆಯಲ್ಲಿದ್ದ ಮೂರು ಪವನ್ ತೂಕದ ಜಿನ್ನದ ಸರವನ್ನು ಎಳೆದು ಪರಾರಿಯಾಗಿದ್ದರು. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಂಟ್ವಳ ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಹಾಗೂ ಬಂಟ್ವಾಳ ನಗರ ಠಾಣೆ ಅಪರಾಧ ವಿಭಾಗದ ಎಸೈ ಕಲೈಮಾರ್, ತಂಡ ರಚಿಸಿ ತನಿಖೆ ಆರಂಭಿಸಿದ್ದರು.

ಸ್ಥಳೀಯ ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಿದಾಗ ಅಜ್ಜಿ ತೆರಳಿದ್ದ ರಸ್ತೆಯಲ್ಲಿ ಅಂತಹ ಘಟನೆಗಳು ನಡೆದ ಸುಳಿವು ಸಿಗಲಿಲ್ಲ. ಅಂತಿಮವಾಗಿ ಅಜ್ಜಿಯ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ತನ್ನ ಸರವನ್ನು ಸಂಬಂಧಿಕರಿಗೆ ನೀಡಿದ್ದು, ಮಗಳು ಬೈಯುತ್ತಾಳೆ ಎಂಬ ಕಾರಣಕ್ಕೆ ಬೆನ್ನಿಗೆ ಪರಚಿದ ರೀತಿಯಲ್ಲಿ ಗಾಯ ಮಾಡಿಕೊಂಡು, ದರೋಡೆ ನಾಟಕ ಹೆಣೆದಿರುವುದು ಬೆಳಕಿಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net