

ಹುಬ್ಬಳ್ಳಿ: ಅಪರಾಧ ಕೃತ್ಯ ತಡೆ, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಸರ್ಕಾರದ ಸಂಪೂರ್ಣ ಬೆಂಬಲವಿದೆ. ಅವಳಿ ನಗರವನ್ನು ಅಪರಾಧ ಮುಕ್ತನ್ನಾಗಿಸಲು ಪೊಲೀಸ್ ಇಲಾಖೆ ಶ್ರಮಿಸಬೇಕು ಎಂದು ಶಾಸಕ ಹಾಗೂ ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಸಲಹೆ ನೀಡಿದರು.
ಇಲ್ಲಿಯ ಅಯೋಧ್ಯಾ ನಗರದ ಶ್ರೀರಾಮ ಕಾಲನಿ ಬಳಿಯ ನೂತನ ಸಭಾ ಭವನದಲ್ಲಿ ಸ್ಥಾಪಿಸಲಾದ ಹಳೆಯ ಹುಬ್ಬಳ್ಳಿ ಪೊಲೀಸ್ ಠಾಣೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಹಳೆಯ ಹುಬ್ಬಳ್ಳಿ ಪೊಲೀಸ್ ಠಾಣೆ ಜಾಗದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗುವುದು. 5 ಸಾವಿರ ಚದರಡಿಯಲ್ಲಿ ಸುಸಜ್ಜಿತ ಜನಸ್ನೇಹಿ ಪೊಲೀಸ್ ಠಾಣೆ ನಿರ್ಮಾಣಕ್ಕೆ ಯೋಜನೆ ಸಿದ್ಧಗೊಂಡಿದ್ದು, ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲೇ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು. ತಾತ್ಕಾಲಿಕವಾಗಿ ಶ್ರೀರಾಮ ಕಾಲನಿಯಲ್ಲಿ ನಿರ್ಮಿಸಿರುವ ನೂತನ ಕಟ್ಟಡಕ್ಕೆ ಸ್ಥಳಾಂತರಿಸಿ ಉದ್ಘಾಟಿಸಲಾಗಿದೆ ಎಂದರು.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಡಿಸಿಪಿಗಳಾದ ಮಹಾನಿಂಗ ನಂದಗಾಂವಿ, ಸಿ.ಆರ್. ರವೀಶ, ಎಸಿಪಿಗಳಾದ ಉಮೇಶ ಚಿಕ್ಕಮಠ, ವೀರೇಶ, ಪೊಲೀಸ್ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ ಸಿಂದೂರ, ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹುಸೇನ್ ಹಳ್ಳೂರ ಇತರರು ಇದ್ದರು.