ನ.30ರಿಂದ ಹಳೆ ಪಾದರಕ್ಷೆಗಳ ಸಂಗ್ರಹ ಅಭಿಯಾನ

udp-27-nadige.jpg 1
Published on

ಉಡುಪಿ: ಎಂಜಿಎಂ ಕಾಲೇಜಿನ ಆವರಣದಲ್ಲಿ ನ.30 ರಿಂದ ಡಿ.2ರವರೆಗೆ 'ನಡಿಗೆ' ಹಳೆಯ ಪಾದರಕ್ಷೆಗಳ ಬೃಹತ್​ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಸುಸ್ಥಿತಿಯಲ್ಲಿರುವ ಪಾದರಕ್ಷೆಗಳನ್ನು ದಾನ ರೂಪದಲ್ಲಿ ನೀಡಬಹುದು ಎಂದು ಕಾರ್ಯಕ್ರಮ ಸಂಯೋಜಕ ಅವಿನಾಶ್​ ಕಾಮತ್​ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಭಿಯಾನದಲ್ಲಿ ಸಂಗ್ರಹವಾಗುವ ಪಾದರಕ್ಷೆಗಳನ್ನು ಮುಂಬೈ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ಗ್ರೀನ್ಸೋಲ್​ ಸಂಸ್ಥೆಗೆ ಕಚ್ಚಾವಸ್ತುಗಳ ರೂಪದಲ್ಲಿ ನೀಡಲಾಗುತ್ತದೆ. ಈ ಪಾದರಕ್ಷೆಗಳಿಂದ ಹೊಸ ಆರಾಮದಾಯಕ ಚಪ್ಪಲಿಗಳನ್ನು ತಯಾರಿಸಿ ದೇಶದಾದ್ಯಂತ ಇರುವ ಅಶಕ್ತರಿಗೆ, ಪಾದರಕ್ಷೆರಹಿತರಿಗೆ ಉಚಿತವಾಗಿ ಹಂಚಲಾಗುತ್ತದೆ. ಪರಿಸರಕ್ಕೆ ಪೂರಕ ಚಟುವಟಿಕೆಯನ್ನು ಈ ಸಂಸ್ಥೆ 2017 ರಿಂದ ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದ್ದು, ಈವರೆಗೆ 6 ಲಕ್ಷಕ್ಕೂ ಅಧಿಕ ಪಾದರಕ್ಷೆಗಳನ್ನು ನೀಡಿದೆ ಎಂದರು.

30ಕ್ಕೆ ಉದ್ಘಾಟನೆ
ನ.30ರಂದು ಬೆಳಗ್ಗೆ 9 ಗಂಟೆಗೆ ಅಭಿಯಾನಕ್ಕೆ ಪರಿಸರವಾದಿ ದಿನೇಶ್​ ಹೊಳ್ಳ ಚಾಲನೆ ನೀಡಲಿದ್ದಾರೆ. ಮಣಿಪಾಲ ಮಹಿಳಾ ಸಮಾಜ ಅಧ್ಯೆ ಡಾ. ಸುಲತಾ ಭಂಡಾರಿ, ಸಂಸತಿ ವಿಶ್ವ ಪ್ರತಿಷ್ಠಾನ ಅಧ್ಯಕ್ಷ ವಿಶ್ವನಾಥ ಶೆಣೈ, ಕಾಲೇಜು ಪ್ರಾಂಶುಪಾಲ ಲಕ್ಷಿ ನಾರಾಯಣ ಕಾರಂತ, ಉದ್ಯಮಿ ರವೀಂದ್ರ ಶೆಟ್ಟಿ ಉಪಸ್ಥಿತರಿರುವರು.

ಡಿ.3ಕ್ಕೆ ಸಮಾರೋಪ
ಡಿ.3ರಂದು ಸಾಯಂಕಾಲ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಗ್ರೀನ್​ ಸೋಲ್​ ಸಂಸ್ಥೆ ಸಂಸ್ಥಾಪಕರಾದ ರಮೇಶ್​ ಧಾಮಿ ಮತ್ತು ಶ್ರಿಯಾನ್ಸ್​ ಭಂಡಾರಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಉಡುಪಿ ಭಾಗದ ಅಯ್ದ 75 ಶಾಲಾ ವಿದ್ಯಾರ್ಥಿಗಳಿಗೆ ಹಳೆಯ ಬಟ್ಟೆಯಿಂದ ತಯಾರಿಸಿದ ಬ್ಯಾಗ್​, ಕುಳಿತುಕೊಳ್ಳುವ ಮ್ಯಾಟ್​, ರೀಸೈಕಲ್​ ಮಾಡಿದ ಪಾದರೆಗಳನ್ನು ವಿತರಿಸಲಾಗುವುದು ಎಂದರು.

ಕಸಾಪ ತಾಲೂಕು ಅಧ್ಯಕ್ಷ ರವಿರಾಜ್​ ಎಚ್​.ಪಿ. ಮಾತನಾಡಿ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಕಳಕಳಿಯಿಂದ ಕಾರ್ಯನಿರ್ವಹಿಸುತ್ತಿರುವ ಗ್ರೀನ್​ ಸೋಲ್​ ಸಂಸ್ಥೆ ಸಂಸ್ಥಾಪಕರಾದ ರಮೇಶ್​ ಧಾಮಿ ಮತ್ತು ಶ್ರಿಯಾನ್ಸ್​ ಭಂಡಾರಿ ಅವರೊಂದಿಗೆ ಡಿಸೆಂಬರ್​ 4 ರಂದು ಸಾಯಂಕಾಲ 4.30 ರಿಂದ ಬಡಗಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಎಂಜಿಎಂ ಉಪನ್ಯಾಸಕ ಸುಜಿತ್​ ಕೋಟ್ಯಾನ್, ಅಭಿಗೈಲ್​ ಅಂಚನ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net