ಹಳೇ ಡಿ.ಸಿ. ಕಚೇರಿ ಕಟ್ಟಡ ನವೀಕರಣ ರದ್ದು

dc office old
Published on

ಪಿ.ಬಿ. ಹರೀಶ್ ರೈ ಮಂಗಳೂರು

ಚುನಾವಣಾ ತಕರಾರು ಅರ್ಜಿಯೊಂದು ಪಾರಂಪರಿಕ ಕಟ್ಟಡವೊಂದರ ರಕ್ಷಣೆಗೆ ಪರೋಕ್ಷ ಅಡ್ಡಿಯಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಮಾಡಲು ಉದ್ದೇಶಿಸಿದ್ದ ಹಳೇ ಡಿ.ಸಿ ಕಚೇರಿ ಕಟ್ಟಡ ನವೀಕರಣ ಯೋಜನೆಯನ್ನೇ ಈಗ ಕೈ ಬಿಡಲಾಗಿದೆ.!

2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ವಿದ್ಯುನ್ಮಾನ ಮತಯಂತ್ರ(ಇವಿಎಂ) ದುರ್ಬಳಕೆ ಮಾಡಿದ್ದೇ ಕಾರಣ ಎಂದು ಆರೋಪಿಸಿ ಮಂಗಳೂರು ದಕ್ಷಿಣ ಕ್ಷೇತ್ರದ ಪರಾಜಿತ ಅಭ್ಯರ್ಥಿ ಜೆ.ಆರ್.ಲೋಬೊ ನ್ಯಾಯಾಲಯದ ಮೆಟ್ಟಲೇರಿದ್ದರು. ಈ ಅರ್ಜಿಗೆ ಸಂಬಂಧಿಸಿ ನ್ಯಾಯಾಲಯದಲ್ಲಿ ಈಗಲೂ ವಿಚಾರಣೆ ನಡೆಯುತ್ತಿದೆ. ತೀರ್ಪು ನೀಡುವ ತನಕ ಈ ಕ್ಷೇತ್ರದ 244 ಮತಯಂತ್ರಗಳನ್ನು ವಿಲೇವಾರಿ ಮಾಡುವಂತಿಲ್ಲ. ಹಳೇ ಡಿ.ಸಿ. ಕಚೇರಿ ಕಟ್ಟಡದೊಳಗೆ ಮತಯಂತ್ರಗಳನ್ನು ವರ್ಷದಿಂದ ಭದ್ರತೆಯಲ್ಲಿ ಇರಿಸಲಾಗಿದೆ. ಹಾಗಾಗಿ ಕಟ್ಟಡದ ನವೀಕರಣಕ್ಕೆ ಅಡ್ಡಿಯಾಗಿದೆ.

ಶಿಥಿಲಾವಸ್ಥೆಯ ಕಟ್ಟಡ: ಹಳೇ ಡಿ.ಸಿ ಕಚೇರಿ ಕಟ್ಟಡಕ್ಕೆ ಶತಮಾನದ ಇತಿಹಾಸವಿದೆ. ಕೆಂಪು ಕಲ್ಲಿನಿಂದ ನಿರ್ಮಾಣವಾದ ಈ ಕಟ್ಟಡ ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲೇ ಆಡಳಿತ ಕಚೇರಿಯಾಗಿತ್ತು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ನಗರದ ಪಾರಂಪರಿಕ ಕಟ್ಟಡಗಳನ್ನು ಗುರುತಿಸಿ ಸಂರಕ್ಷಿಸುವ ಅಭಿಯಾನದಡಿ ಪ್ರಥಮ ಹಂತದಲ್ಲೇ ಈ ಕಟ್ಟಡವನ್ನು ಗುರುತಿಸಿತ್ತು. ಆದರೆ ಸೂಕ್ತ ನಿರ್ವಹಣೆ ಇಲ್ಲದೆ, ರಕ್ಷಣೆಯೂ ಇಲ್ಲದೆ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಐದಾರು ಸರ್ಕಾರಿ ಕಚೇರಿಗಳು ಈ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ.

10 ಕೋಟಿ ರೂ.ಯೋಜನೆ: ಹಳೇ ಡಿ.ಸಿ ಕಚೇರಿ ಕಟ್ಟಡವನ್ನು ಮ್ಯೂಸಿಯಂ ಮಾಡುವ ಪ್ರಸ್ತಾವನೆಯೂ ಜಿಲ್ಲಾಡಳಿತದ ಮುಂದಿತ್ತು. ಅಂತಿಮವಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ 10 ಕೋಟಿ ರೂ. ವೆಚ್ಚದಲ್ಲಿ ಪಾರಂಪರಿಕ ಕಟ್ಟಡವಾಗಿ ಸಂರಕ್ಷಿಸುವ ಯೋಜನೆ ರೂಪಿಸಲಾಗಿತ್ತು. ಆದರೆ ಈಗ ಮತಯಂತ್ರಗಳು ಕಟ್ಟಡದ ಒಳಗಿರುವ ಕಾರಣ ನವೀಕರಣ ಕಾಮಗಾರಿ ನಡೆಸುವಂತಿಲ್ಲ. ನ್ಯಾಯಾಲಯದ ಮುಂದಿರುವ ಪ್ರಕರಣ ಇತ್ಯರ್ಥವಾಗಲು ಇನ್ನೂ ಒಂದೆರಡು ವರ್ಷ ಬೇಕಾಗಬಹುದು ಎನ್ನಲಾಗಿದೆ.

ಹಳೇ ಡಿ.ಸಿ. ಕಚೇರಿ ಕಟ್ಟಡದೊಳಗೆ ಮಂಗಳೂರು ದಕ್ಷಿಣ ಕ್ಷೇತ್ರದ ಮತಯಂತ್ರಗಳನ್ನು ಭದ್ರತೆಯಲ್ಲಿ ಇರಿಸಲಾಗಿದೆ. ನ್ಯಾಯಾಲಯ ಹಾಗೂ ಚುನಾವಣಾ ಆಯೋಗ ಸೂಚನೆ ನೀಡುವ ತನಕ ಮತಯಂತ್ರಗಳನ್ನು ತೆರವುಗೊಳಿಸುವಂತಿಲ್ಲ. ಇದರಿಂದ ಕಟ್ಟಡದ ನವೀಕರಣ ಪ್ರಸ್ತಾವನೆಯನ್ನು ಸದ್ಯ ಕೈ ಬಿಡುವುದು ಅನಿವಾರ್ಯವಾಗಿದೆ. - ಮಹಮ್ಮದ್ ನಜೀರ್, ವ್ಯವಸ್ಥಾಪಕ ನಿರ್ದೇಶಕರು, ಸ್ಮಾರ್ಟ್ ಸಿಟಿ, ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net