

ಬೆಂಗಳೂರು: ಬಹುದಿನಗಳ ಕನಸಿನಂತೆ ದಕ್ಷಿಣ ಅಮೆರಿಕ ಪ್ರವಾಸ ಕೈಗೊಂಡಿದ್ದ ವೃದ್ಧ ದಂಪತಿ, ಪ್ರವಾಸ ಮೊಟಕುಗೊಳಿಸಿ ಮರಳಿದರೂ ಕರೊನಾ ಸೋಂಕಿಗೀಡಾದರು. ಮಾ. 25ರಂದು ಆಸ್ಪತ್ರೆಗೆ ದಾಖಲಾದ ರೋಗಿ 43 ಮತ್ತು 44 (63, 59 ವರ್ಷದ ದಂಪತಿ) ವೈದ್ಯರ ಚಿಕಿತ್ಸೆ, ದಾದಿಯರ ಆರೈಕೆ ಜತೆಗೆ ಆತ್ಮಸ್ಥೈರ್ಯದಿಂದ ಕೋವಿಡ್-19 ವಿರುದ್ಧ ಹೋರಾಡಿ ಗುಣಮುಖರಾಗಿ ಏ. 11ರಂದು ಮನೆಗೆ ಮರಳಿದ್ದಾರೆ. ಈ ಕುರಿತು ವಿಜಯವಾಣಿ ಜತೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಫೆಬ್ರವರಿ ಕೊನೆಯ ವಾರ ನಮ್ಮ ಕನಸಿನಂತೆ ದಕ್ಷಿಣ ಅಮೆರಿಕ ಪ್ರವಾಸ ಕೈಗೊಂಡಿದ್ದೆವು. ಫೆ.28ರಂದು ಬ್ರೆಜಿಲ್ಗೆ ತೆರಳಿದ್ದೆವು. ಅಲ್ಲಿಂದ ಅರ್ಜೆಂಟೀನಾ ಮತ್ತು ಅಮೆಜಾನ್ನ ದಟ್ಟ ಅರಣ್ಯಗಳಿಗೆ ಭೇಟಿ ನೀಡಿ, ಮಾ. 15ಕ್ಕೆ ಪೆರು ದೇಶದ ಪ್ರವಾಸದಲ್ಲಿದ್ದೆವು. ಆ ವೇಳೆ ಪೆರು ಸರ್ಕಾರ ಇದ್ದಕ್ಕಿದ್ದಂತೆ ಲಾಕ್ಡೌನ್ ಘೋಷಿಸಿತು. 24 ಗಂಟೆಯೊಳಗೆ ವಿದೇಶಿಗರು ತಂತಮ್ಮ ದೇಶಗಳಿಗೆ ತೆರಳಲು ಅವಕಾಶವಿದ್ದು, ನಂತರ ಅಂತಾರಾಷ್ಟ್ರೀಯ ವಿಮಾನ ಸಂಪರ್ಕ ಕಡಿತಗೊಳ್ಳಲಿದೆ ಎಂದರು. ಪ್ರವಾಸಕ್ಕೆ ವ್ಯವಸ್ಥೆ ಮಾಡಿದ್ದ ಸಂಸ್ಥೆಯ ಪ್ರಧಾನ ಕಚೇರಿಗೆ ತಕ್ಷಣ ಕರೆ ಮಾಡಿದೆವು. ಅವರು ಭಾರತಕ್ಕೆ ಮರಳುವ ಮಾರ್ಗ ಬದಲಾಗಿದೆ. ಹೀಗಾಗಿ ಅಮೆರಿಕ ಮಾರ್ಗವಾಗಿ ತೆರಳಲು ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗಿದೆ ಎಂದರು. ಭಾರತ ತಲುಪಿದರೆ ಸಾಕು ಎಂಬುದಷ್ಟೇ ನಮ್ಮ ಆ ಕ್ಷಣದ ಗುರಿಯಾಗಿತ್ತು. ಮಾ.17ರಂದು ಅಮೆರಿಕದ ಮಿಯಾಮಿ ತಲುಪಿದೆವು. ಮಾ.18ರಂದು ಅಲ್ಲಿಂದ ಹೊರಟು ಮಾ. 19ರಂದು ಮುಂಬೈಗೆ ಬಂದು, ಅಲ್ಲಿಂದ ಅಂದು ರಾತ್ರಿಯೇ ಬೆಂಗಳೂರಿಗೆ ಆಗಮಿಸಿದೆವು.
ಮಾರ್ಗ ಮಧ್ಯೆ ಬಂತೇ ಕರೊನಾ?: ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಸೋಂಕು ಕಂಡು ಬರಲಿಲ್ಲ. ಆದರೆ ಪೆರುವಿನಿಂದ ಬೆಂಗಳೂರು ಸೇರುವ ವೇಳೆ ಮಾರ್ಗ ಮಧ್ಯದಲ್ಲಿ ಯಾವಾಗ? ಹೇಗೆ? ಕರೊನಾ ವೈರಸ್ ನಮ್ಮನ್ನು ಆವರಿಸಿತೋ ತಿಳಿಯಲಿಲ್ಲ. ಮನೆಗೆ ಬಂದವರೇ ಮುನ್ನೆಚ್ಚರಿಕೆಯಿಂದಾಗಿ ಸ್ವಯಂ ಕ್ವಾರಂಟೈನ್ಗೆ ಒಳಗಾದೆವು. ಮೂರು ದಿನಗಳ ಬಳಿಕ ತೀವ್ರ ಜ್ವರ ಬಂದು ಜಯನಗರದ ಸರ್ಕಾರಿ ಆಸ್ಪತ್ರೆಗೆ ಹೋದಾಗ, ಸಾಮಾನ್ಯ ಜ್ವರ ಹೆದರಬೇಡಿ ಎಂದರು. ಆದರೂ ನಮಗೆ ಸೋಂಕಿನ ಭೀತಿ ಇದ್ದು ಪರೀಕ್ಷೆ ಮಾಡಿ ಎಂದೆವು. ಇಲ್ಲಿ ಐಸೋಲೇಷನ್ ವ್ಯವಸ್ಥೆ ಇಲ್ಲ, ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಗೆ ಹೋಗಿ ಎಂದರು. ಅಲ್ಲಿ ವೈದ್ಯರು ನಮ್ಮಿಬ್ಬರ ಸ್ವಾ್ಯಬ್ ಮತ್ತು ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದರು. ಮರುದಿನ ಬಿಬಿಎಂಪಿ ವೈದ್ಯಾಧಿಕಾರಿ ಕರೆ ಮಾಡಿ, ನಿಮಗೆ ಸೋಂಕು ದೃಢಪಟ್ಟಿದೆ, ಕೂಡಲೇ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಾಗಿ ಎಂದರು. ಆಸ್ಪತ್ರೆಗೆ ದಾಖಲಾದೆವು. ಆದರೂ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಹಾಗೂ ಸೌಲಭ್ಯ ವ್ಯವಸ್ಥಿತವಾಗಿರುವುದಿಲ್ಲ ಎಂದು ಭಾವಿಸಿ ಅಲ್ಲಿಂದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಗೊಂಡೆವು. ಕೆಲ ದಿನಗಳ ಚಿಕಿತ್ಸೆ ನೀಡಿದ ಬಳಿಕ ಅಲ್ಲಿನ ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲೂ ಸುಸಜ್ಜಿತ ವ್ಯವಸ್ಥೆ ಇದೆ ಎಂದು ಅಲ್ಲಿನ ಸೌಲಭ್ಯಗಳ ಕುರಿತು ವಿವರಿಸಿದರು. ಒಲ್ಲದ ಮನಸ್ಸಿನಿಂದಲೇ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಗೊಂಡೆವು. ಅಲ್ಲಿನ ಸೌಲಭ್ಯ, ವ್ಯವಸ್ಥೆ, ವೈದ್ಯರ ಹಾಗು ದಾದಿಯರ ಆರೈಕೆ ಸರ್ಕಾರಿ ಆಸ್ಪತ್ರೆ ಬಗ್ಗೆ ನಮ್ಮಲ್ಲಿದ್ದ ತಪ್ಪು ಕಲ್ಪನೆಯನ್ನು ಬದಲಿಸಿತು ಎಂದು ಸರ್ಕಾರಿ ಆಸ್ಪತ್ರೆ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಧುಮೇಹ, ರಕ್ತದೊತ್ತಡದ ಜತೆಗೆ ಕರೊನಾಗೆ ಚಿಕಿತ್ಸೆ ಪಡೆಯಬೇಕಾಗಿತ್ತು. ಈ ನಡುವೆ ಉಸಿರಾಟದಲ್ಲಿ ಸಮಸ್ಯೆಯಾಗಿ ಆಕ್ಸಿಜನ್ ಮೊರೆ ಹೋಗಬೇಕಾಯಿತು. ಪತ್ನಿಗೂ ಮಧುಮೇಹವಿತ್ತು. ಆಂಟಿಬಯಾಟಿಕ್ನಿಂದ ದೇಹ ಬಸವಳಿದಿತ್ತು. ಆರಂಭದಲ್ಲಿ ಊಟವೇ ಸೇರುತ್ತಿರಲಿಲ್ಲ, ವೈದ್ಯರಲ್ಲಿ ಹೇಳಿದಾಗ ಮೆನು ಬದಲಿಸಿದರು. ನಂತರ ನಿತ್ಯ ಬೇರೆ ಬೇರೆ ಉಪಾಹಾರ-ಊಟದ ವ್ಯವಸ್ಥೆ ಮಾಡಿದರು. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಚಿಕಿತ್ಸೆ ಜತೆ ಕಷಾಯ ಸಹ ನೀಡುತ್ತಿದ್ದರು. ಆದರೆ ಈ ಇಳಿ ವಯಸ್ಸಿನಲ್ಲಿ ಆ 18 ದಿನಗಳನ್ನು ಕಳೆಯುವುದು ಸುಲಭವಾಗಿರಲಿಲ್ಲ. ಹಾಗೆಂದು ಸೋಂಕಿತರು ಹೆದರುವ ಅಗತ್ಯವಿಲ್ಲ. ವೈದ್ಯರ, ದಾದಿಯರ ಸಲಹೆ ಪಾಲಿಸಿದರೆ ಬೇಗ ಗುಣಹೊಂದಬಹುದು ಎಂದು ವಿವರಿಸಿದರು ದಂಪತಿ.
ಸರ್ಕಾರಿ ಆಸ್ಪತ್ರೆ ಸೇವೆಗೆ ಮೆಚ್ಚುಗೆ
ಕರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದಾಗಲೇ ಸರ್ಕಾರಿ ಆಸ್ಪತ್ರೆಯ ಸೌಲಭ್ಯದ ಬಗ್ಗೆ ತಿಳಿಯಿತು. ರೋಗಿಗಳ ಸೇವೆಗೆ ನಿಂತಿರುವ ವೈದ್ಯರು-ದಾದಿಯರ ಶ್ರಮದ ಅರಿವಾಯಿತು. ಅವರ ಸೇವೆ ಸಾರ್ಥಕ ಆಗಬೇಕಾದರೆ, ಜನರು ಸರ್ಕಾರದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಎಲ್ಲರೂ ಮನೆಯಲ್ಲೇ ಇರಿ ಎಂಬುದು ಈ ದಂಪತಿಯ ಮೆಚ್ಚುಗೆ ಮತ್ತು ಸಲಹೆ.
| ಪಂಕಜ ಕೆ.ಎಂ.