

ಪಾವಗಡ: ಗುಜ್ಜನಡು ಗ್ರಾಪಂ ವ್ಯಾಪ್ತಿಯ ಪೆಮ್ಮನಹಳ್ಳಿಯ ಬೆಟ್ಟದ ತಪ್ಪಲಿನಲ್ಲಿರುವ ತಿಮ್ಮಪ್ಪನ ದೇವಸ್ಥಾನದ ಬಳಿಯಿರುವ ಕಲ್ಯಾಣಿ ಸ್ವಚ್ಛಗೊಳಿಸುವಾಗ ಚಲಾವಣೆಯಲ್ಲಿರುವ 4 ಚೀಲದಷ್ಟು ನಾಣ್ಯಗಳ ಜತೆಗೆ ಅರ್ಧ ಚೀಲದಷ್ಟು 18 ಮತ್ತು 19ನೇ ಶತವಾನದ ನಾಣ್ಯಗಳು ಪತ್ತೆಯಾಗಿವೆ.
ಕಲ್ಯಾಣಿಯಲ್ಲಿ ವಿಜಯನಗರ ಸಾಮ್ರಾಜ್ಯ, ಮೈಸೂರು ಅರಸರು ಹಾಗೂ ಟಿಪ್ಪು ಸುಲ್ತಾನ್ ಆಳ್ವಿಕೆ ಕಾಲದ ನಾಣ್ಯಗಳು ದೊರೆತಿವೆ ಎಂದು ಹೇಳಲಾಗಿದೆ. ತಹಸೀಲ್ದಾರ್ ಡಿ.ವರದರಾಜು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ನಾಣ್ಯಗಳನ್ನು ಪರಿಶೀಲಿಸಿದರು. ಪುರಾತನ ಕಾಲದ ನಾಣ್ಯಗಳನ್ನು ಪ್ರಾಚ್ಯವಸ್ತು ಇಲಾಖೆ ಸುಪರ್ದಿಗೆ ನೀಡಲಾಗುವುದು. ಆಧುನಿಕ ಕಾಲದ ನಾಣ್ಯಗಳನ್ನು ದೇವಸ್ಥಾನದ ಅಭಿವೃದ್ಧಿ ಸಮಿತಿ ವಶಕ್ಕೆ ಪಡೆಯಬೇಕು. ಹಳೇ ನಾಣ್ಯದ ಚೀಲಗಳನ್ನು ಗ್ರಾಮದ ಶ್ರೀರಾಮ ದೇಗುಲದಲ್ಲಿ ಇರಿಸಬೇಕು ಎಂದು ಗ್ರಾಮಸ್ಥರಿಗೆ ಸೂಚಿಸಿದರು.
18ನೇ ಶತಮಾನದಲ್ಲಿ ಗ್ರಾಮದ ಬೆಟ್ಟದ ಮೇಲೆ ತಿಮ್ಮಪ್ಪನ ಮೂರ್ತಿ ಉದ್ಭವವಾಗಿದ್ದು, ಶ್ರಾವಣ ವಾಸದಲ್ಲಿ ಭಕ್ತರು ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಹರಕೆ ತೀರಿಸುವಂತೆ ಕಲ್ಯಾಣಿಗೆ ನಾಣ್ಯಗಳನ್ನು ಹಾಕುವ ಪದ್ಧತಿ ಇದೆ. ಗ್ರಾಮದ ಯುವಕರು ಕಲ್ಯಾಣಿ ಸ್ವಚ್ಛಗೊಳಿಸುವಾಗ ಸುವಾರು ಅರ್ಧ ಚೀಲದಷ್ಟು ಬ್ರಿಟಿಷರ ಕಾಲದ ಮತ್ತು 4 ಚೀಲಗಳಷ್ಟು ಚಲಾವಣೆಯಲ್ಲಿರುವ ನಾಣ್ಯಗಳು ಸಿಕ್ಕಿವೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ರಾಜಕುಮಾರ್ ತಿಳಿಸಿದರು.
ಮುಖಂಡ ಪೆಮ್ಮನಹಳ್ಳಿ ಶ್ರೀನಾಥ್ ಮಾತನಾಡಿ, ಐತಿಹಾಸಿಕ ದೇವಸ್ಥಾನವನ್ನು ಸರ್ಕಾರ ಮುಜರಾಯಿ ಇಲಾಖೆಗೆ ಸೇರಿಸಿ ಅಭಿವೃದ್ದಿ ಪಡಿಸಬೇಕು ಎಂದು ಮನವಿ ಮಾಡಿದರು.
ನಿಡಗಲ್ ಅರಸರ ಕಾಲದಲ್ಲಿ ಹೊಟ್ಟಣ್ಣ ನಾಯ್ಕ ಸಂತಾನಪ್ರಾಪ್ತಿಗಾಗಿ ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತು, ಮಕ್ಕಳಾದಾಗ ಗ್ರಾಮದಲ್ಲಿ ತಿಮ್ಮಪ್ಪನ ದೇವಸ್ಥಾನ ಕಟ್ಟಿಸಿದ್ದಾರೆ ಸಣ್ಣನಾಗಪ್ಪ, ಜಾನಪದ ವಿದ್ವಾಂಸ