ಕುಸಿಯುವ ಭೀತಿಯಲ್ಲಿ ಓಲ್ಡ್ ಬಸ್ಟ್ಯಾಂಡ್, ಮಲ್ಟಿಲೆವೆಲ್ ಕಾರ್‌ಪಾರ್ಕಿಂಗ್ ಹೆಸರಲ್ಲಿ ಕಳಪೆ ಕಾಮಗಾರಿ, ಅಪಾಯದ ಬಗ್ಗೆ ಅಭಯ ನೀಡಿದ ಗುಳಿಗ ದೈವ

mng-june6-old service busstand1
ಮಲ್ಟಿಲೆವೆಲ್ ಕಾರ್‌ಪಾರ್ಕಿಂಗ್ ಕಳಪೆ ಕಾಮಗಾರಿಯಿಂದ ಕುಸಿಯುವ ಭೀತಿ ಎದುರಾಗಿದೆ.
Published on

ಶ್ರವಣ್‌ಕುಮಾರ್ ನಾಳ, ಮಂಗಳೂರು

ಮಂಗಳೂರು ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ನಿವಾರಿಸಲು ಸ್ಮಾರ್ಟ್‌ಸಿಟಿ ಹಾಗೂ ಸಾರ್ವಜನಿಕ ಸಹಭಾಗಿತ್ವದ ಉದ್ದೇಶಿಸಿರುವ ಬಹು ಅಂತಸ್ತಿನ ಪಾರ್ಕಿಂಗ್ ಸಂಕೀರ್ಣ ನಿರ್ಮಾಣದ ಕಳಪೆ ಕಾಮಗಾರಿ ಪರಿಣಾಮ ಓಲ್ಡ್ ಬಸ್ಟ್ಯಾಂಡ್ ಸುತ್ತಮುತ್ತ ಕುಸಿಯುವ ಭೀತಿ ಎದುರಾಗಿದೆ.

ಮಂಗಳೂರಿನಲ್ಲಿ ಪಾರ್ಕಿಂಗ್ ಸಮಸ್ಯೆ ಬಿಗಡಾಯಿಸುವ ಕಾರಣದಿಂದಾಗಿ 1 ದಶಕದ ಹಿಂದೆಯೇ ಮಂಗಳೂರು ಹಳೆ ಬಸ್ ನಿಲ್ದಾಣ ಪ್ರದೇಶದಲ್ಲಿ (ಹಂಪನಕಟ್ಟ)ಬಹು ಅಂತಸ್ತಿನ ಪಾರ್ಕಿಂಗ್ ಸಂಕೀರ್ಣ ನಿರ್ಮಾಣ ಮಾಡುವ ಪ್ರಸ್ತಾವ ಇತ್ತು. ಅದನ್ನು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಂಡು 2 ವರ್ಷದ ಹಿಂದೆಯೇ ಶಿಲಾನ್ಯಾಸವೂ ನಡೆದಿದೆ. ಬೃಹತ್ ಹೊಂಡ ಮಾಡುವ ಮೂಲಕ ಕಾಮಗಾರಿಯನ್ನೂ ಆರಂಭಿಸಲಾಗಿತ್ತು. ಆದರೆ, ಕಾರಣಾಂತರದಿಂದ ಆ ಕಾಮಗಾರಿ ವೇಗ ಪಡೆಯಲೇ ಇಲ್ಲ. 2 ವರ್ಷ ಸಂದರೂ ಕಾಮಗಾರಿ ಪ್ರಮಾಣ ಏರಿಕೆ ಆಗಲೇ ಇಲ್ಲ. ಮಳೆಗಾಳದಲ್ಲಂತೂ ಬೃಹತ್ ಕೆರೆಯಾಕಾರದಲ್ಲಿ ಈ ಹೊಂಡ ಅಪಾಯಕಾರಿಯಾಗಿ ಪರಿಣಮಿಸಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಯೋಜನಾ ಕಾಮಗಾರಿಗೆ ಮತ್ತೆ ಚುರುಕು ಪಡೆಯುವ ಬರವಸೆಯಿದ್ದರೂ ಹೀಡೇರಿಲ್ಲ. ಮೇಯಲ್ಲಿ ಸುರಿದ ಮೊದಲ ಮಳೆಗೆ ಮಲ್ಟಿಲೆವೆಲ್ ಕಾಮಗಾರಿ ಪ್ರದೇಶ ಕುಸಿತವಾಗುವ ಮೂಲಕ ಆಪತ್ತಿನ ಮುನ್ಸೂಚನೆ ನೀಡಿದೆ.

*ಕಾಮಗಾರಿ ಅವೈಜ್ಞಾನಿಕ ಭೂಕುಸಿತ

ಸ್ಮಾರ್ಟ್ ಸಿಟಿ ಯೋಜನೆಯಡಿ 70 ಕೋಟಿ ರೂ. ವೆಚ್ಚದಲ್ಲಿ 6 ಅಂತಸ್ತಿನ 800ವಾಹನ ಪಾರ್ಕ್ ಮಾಡುವ ಸಾಮಾರ್ಥ್ಯವಿರುವ ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಕಾಮಗಾರಿ ಸ್ಥಳದಲ್ಲಿ 50ಅಡಿ ಅಗೆದಿರುವುದ್ದರಿಂದ ಹೊಂಡದಲ್ಲಿ ನೀರು ನಿಂತಿದೆ. ಇತ್ತೀಚೆಗೆ ಸುರಿದ ಮಳೆಗೆ ಸಮೀಪದ ಗೋಡೆ ಕುಸಿದು ಬಿದ್ದಿದೆ. ಇನ್ನು ಜೋರು ಮಳೆಯಾದರೆ ಮತ್ತಷ್ಟು ಅಪಾಯವಿರುವ ಸಾಧ್ಯತೆಯಿದೆ. ಈ ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಮಾಧ್ಯಮಗಳಲ್ಲಿ ನಿರಂತರ ಸುದ್ದಿಗಳು ಪ್ರಕಟವಾಗುತ್ತಿದ್ದರೂ ಆಡಳಿತ ಮಾತ್ರ ಮೌನವಹಿಸಿದೆ.

*ಕಾಮಗಾರಿಗಿಲ್ಲ ವೇಗ

ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕೆಲಸ ಆರಂಭವಾಗಿ 3 ವರ್ಷವಾಗುತ್ತಾ ಬಂದರೂ ಕೆಲಸ ಮಾತ್ರ ನಿರೀಕ್ಷೆಯ ಮಟ್ಟದಲ್ಲಿ ಆಗಿಲ್ಲ. ಕೇವಲ ಪಿಲ್ಲರ್ ಕೆಲಸ ಕೊಂಚ ಆಗಿದೆ ಬಿಟ್ಟರೆ ಕಾಮಗಾರಿಗೆ ವೇಗ ಸಿಕ್ಕಿಲ್ಲ. ಈ ಕಾಮಗಾರಿಯು ಜಾಗ ಮಂಗಳೂರು ಮಹಾನಗರ ಪಾಲಿಕೆಯಾದ್ದಾಗಿದ್ದುಘಿ, ಕಾರ್ ಸ್ಟ್ರಕ್ಚರ್ ಸಂಸ್ಥೆಗೆ ಕಾಮಗಾರಿ ವಹಿಸಲಾಗಿದೆ.

-------------------

ಅಭಯ ನೀಡಿದ ಗುಳಿಗ ದೈವ

ಆರಂಭವಾಗಿ ಎರಡೂವರೆ ವರ್ಷ ಕಳೆದರೂ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಕಾಮಗಾರಿ ಅವೈಜ್ಞಾನಿಕವಾಗಿದ್ದು, ಭೂಕುಸಿತವಾಗುವ ಭೀತಿ ಸಾರ್ವಜನಿಕರಲ್ಲಿತ್ತು. ಇದರಿಂದ ಸುತ್ತಮುತ್ತಲ ವ್ಯಾಪಾರಿಗಳು ಕಟ್ಟಡದ ಮಾಲೀಕರು ಆತಂಕಿತರಾಗಿ, ಇತ್ತೀಚೆಗೆ ಶರವು ಮಹಾಗುಳಿಗ ಕೋಲದ ಸಂದರ್ಭ ದೈವದ ಬಳಿ ದೂರು ನೀಡಿದ್ದರು. ಈ ಸಂದರ್ಭ ಅಭಯ ನೀಡಿದ ಗುಳಿಗ ದೈವ, ‘ನಿಮ್ಮ ರಕ್ಷಣೆಗೆ ನಾನಿದ್ದೇನೆ. ಆದರೆ ಈ ಸ್ಥಳದಲ್ಲಿ ಮುಂದೆ ದೊಡ್ಡ ಗಂಡಾಂತರ ಕಾದಿದೆ. ಅದಕ್ಕೆ ಹೊಣೆಗಾರರನ್ನು ನೋಡಿಕೊಳ್ಳುವೆ ಎಂದು ಹೇಳಿತ್ತು. ಇತ್ತೀಚೆಗೆ ಸುರಿದ ಮಳೆಗೆ ಒಂದು ಬದಿಯ ಮಣ್ಣು ಕುಸಿತವಾಗಿದ್ದು, ಆ ಭಾಗದಲ್ಲಿ ಜನರ ಸಂಚಾರಕ್ಕೆ ತಡೆಯೊಡ್ಡಲಾಗಿದೆ. ಇದರಿಂದ ವ್ಯಾಪಾರಿಗಳು, ಸ್ಥಳೀಯರಲ್ಲಿ ಮತ್ತೆ ಆತಂಕ ಹೆಚ್ಚಿದೆ.

-------------------

ಮಂಗಳೂರು ನಗರದ ಬಹುತೇಕ ಅಭಿವೃದ್ದಿ ಕಾಮಗಾರಿಗಳು ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ನಡೆಯುವಂತದ್ದು, ಈ ಕಾರಣದಿಂದಾಗಿ ಹಂತ ಹಂತವಾಗಿ ಒಂದೆಂದೇ ಕಾಮಗಾರಿ ಪೂರ್ಣಗೊಳಿಸಲು ಗಡು ನೀಡಲಾಗಿದೆ. ಬಹು ಅಂತಸ್ತಿನ ಪಾರ್ಕಿಂಗ್ ಸಂಕೀರ್ಣ ಕಾಮಗಾರಿಯಿಂದ ಅಪಾಯವಾಗುವ ಭೀತಿಯಿದ್ದು ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ ನೀಡಲಾಗಿದೆ.

ಸುದೀರ್ ಶೆಟ್ಟಿ ಕಣ್ಣೂರು, ಮೇಯರ್ ಮಂಗಳೂರು

-------------------

ಮಲ್ಟಿ ಲೆವೆಲ್ ಪಾರ್ಕಿಂಗ್ ಕಾಮಗಾರಿಯ ಭಾಗದಲ್ಲಿ ಮಳೆಯಿಂದ ನೀರು ನಿಂತ ಬಗ್ಗೆ ಮಾಹಿತಿಯಿದ್ದು, ಸಮಸ್ಯೆಯಾಗದಂತೆ ಎಚ್ಚರವಹಿಸಲು ಈಗಾಗಲೇ ಸೂಚಿಸಿದ್ದೇವೆ. ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ.

- ರಾಜು ಕೆ. ಆಡಳಿತ ನಿರ್ದೇಶಕರು, ಸ್ಮಾರ್ಟ್ ಸಿಟಿ, ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net