

ಹುಬ್ಬಳ್ಳಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ವತಿಯಿಂದ ಮೇಲ್ಸೇತುವೆ ಕಾಮಗಾರಿ ತ್ವರಿತಗೊಳಿಸುವ ಸಂಬಂಧ ಏ. 20ರಿಂದ ನಾಲ್ಕು ತಿಂಗಳು ಹೊಸದಾಗಿ ನಿರ್ಮಿಸಿರುವ ಹಳೇ ಬಸ್ ನಿಲ್ದಾಣ(ನಗರ ಸಾರಿಗೆ)ವನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. ಬಸವ ವನದಿಂದ ಚನ್ನಮ್ಮ ವೃತ್ತದವರೆಗೆ 500 ಮೀಟರ್, ಚನ್ನಮ್ಮ ವೃತ್ತದಿಂದ ಹಳೇ ಕೋರ್ಟ್ ವೃತ್ತದವರೆಗೆ 150 ಮೀಟರ್ ಕಾಮಗಾರಿ ನಡೆಯಲಿದೆ. 90 ಗಿರ‌್ಡರ್ ಹಾಗೂ 16 ಸ್ಪಾನ್‌ಗಳ ಸ್ಲಾೃಬ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾದಿಕಾರಿ ದಿವ್ಯಪ್ರಭು ಮಾಹಿತಿ ನೀಡಿದರು.
ನಗರದಲ್ಲಿ ಬುಧವಾರ ಮೇಲ್ಸೇತುವೆ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಟಿ ಪಾರ್ಕ್ ಹತ್ತಿರ ತಾತ್ಕಾಲಿಕ ಬಸ್ ನಿಲ್ದಾಣ ಸ್ಥಾಪಿಸಲಾಗುವುದು. ಅಲ್ಲದೇ ಉಪ ನಗರ ಬಸ್ ನಿಲ್ದಾಣವನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳು ನಿರ್ವಹಣೆ ಹಾಗೂ ರಕ್ಷಣೆ ಮಾಡಬೇಕು. ವಿಜಯಪುರ, ಗದಗ ಹಾಗೂ ಉಳಿದ ಪ್ರದೇಶದಿಂದ ಬರುವ ಬಸ್ಸುಗಳಿಗೆ ಕಾರವಾರ ರಸ್ತೆ, ಸಿಬಿಟಿ ಹಾಗೂ ಹೊಸೂರ ಬಸ್ ನಿಲ್ದಾಣಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು. ಸಂಚಾರ ಸಮಸ್ಯೆಯಾಗದಂತೆ ನಿಗಾವಹಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
3.10 ಕಿ.ಮೀ. ವ್ಯಾಪ್ತಿಯಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯಲಿದ್ದು, ಕೆಲವೆಡೆ ಇರುವ ಭೂಸ್ವಾಧೀನ ಪ್ರಕ್ರಿಯೆ ಈ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ವಿಜಯಪುರ ರಸ್ತೆಯ ಕಡೆಯಿಂದ (710ಮೀ), ಗದಗ ರಸ್ತೆಯಿಂದ (700), ಚನ್ನಮ್ಮ ವೃತ್ತದಿಂದ ಹೊಸೂರ ವೃತ್ತದವರೆಗೆ (850 ಮೀ), ಗೋಕುಲ ರಸ್ತೆಯಲ್ಲಿ ಏರ್‌ಪೋರ್ಟ್ ಕಡೆಗೆ (689ಮೀ), ಧಾರವಾಡ ರಸ್ತೆ ಕಡೆಗೆ (310ಮೀ) ಹಾಗೂ 350 ಮೀ. ಅಪರ‌್ಯಾಂಪ್ ಕಾಮಗಾರಿ ನಡೆಯಲಿದೆ.
ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಸಿ.ಆರ್. ರವೀಶ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಎನ್‌ಎಚ್‌ಎಐ ಅಧೀಕ್ಷಕ ಇಂಜಿನಿಯರ್ ಟಿ. ಪ್ರದೀಪ ಸುದ್ದಿಗೋಷ್ಠಿಯಲ್ಲಿದ್ದರು.