

ದೇವನಹಳ್ಳಿ : ಕರೊನಾ ಸೋಂಕಿಗೆ ಒಂದು ತಿಂಗಳು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ವೃದ್ಧನಲ್ಲಿ ಕಾಣಿಸಿಕೊಂಡಿದ್ದ ಬ್ಲ್ಯಾಕ್ ಫಂಗಸ್ಗೆ ಚಿಕಿತ್ಸೆ ನೀಡಿ ಗುಣಪಡಿಸುವಲ್ಲಿ ಪಟ್ಟಣದ ಖಾಸಗಿ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿದೆ.
ಚಿತ್ರದುರ್ಗ ಜಿಲ್ಲೆಯ ಜಗಳೂರಿನ ನಾಗರಾಜರೆಡ್ಡಿ (70) ಗುಣಮುಖರಾಗಿದ್ದು, ಶನಿವಾರ ಆಸ್ಪತ್ರೆಯಿಂದ ಬಿಡುಗಡೆಯಾದರು.
ಕರೊನಾ ಗೆದ್ದು ಮನೆಗೆ ತೆರಳಿದ್ದ ನಾಗರಾಜರೆಡ್ಡಿ ಅವರಿಗೆ ಕೆಲದಿನಗಳ ಬಳಿಕ ಎಡ ಭಾಗದ ಕೆನ್ನೆಯಲ್ಲಿ ಊತ ಕಾಣಿಸಿಕೊಂಡಿತ್ತು. ಇದು ಬ್ಲ್ಯಾಕ್ ಬ್ಲ್ಯಾಕ್ ಫಂಗಸ್ ಎಂಬುದು ದೃಡಪಟ್ಟಿತ್ತು. ಮಧುಮೇಹದಿಂದ ಬಳಲುತ್ತಿದ್ದ ಅವರನ್ನು ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಈ ಬಗ್ಗೆ ಮಾಹಿತಿ ನೀಡಿದ ನಾಗರಾಜರೆಡ್ಡಿ ಪುತ್ರ ಜಿತೇಂದ್ರ, ಕರೊನಾ ಸೋಂಕಿನಿಂದ ಗುಣಮುಖರಾಗಿದ್ದ ತಂದೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದೆವು. ಕೆಲವೇ ದಿನಗಳಲ್ಲಿ ಎಡಭಾಗದ ದವಡೆ ಮತ್ತು ಕಣ್ಣಿನ ಬಳಿ ಊತ ಕಾಣಿಸಿಕೊಂಡಿತ್ತು. ದಾವಣಗೆರೆ ಹಾಗೂ ಬೆಂಗಳೂರಿಗೆ ಕರೆದೊಯ್ದು, ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಆದರೆ, ಎಲ್ಲಿಯೂ ಅವರು ಗುಣಮುಖರಾಗಲಿಲ್ಲ. ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿದಾಗ ಅದು ಬ್ಲ್ಯಾಕ್ ಬ್ಲ್ಯಾಕ್ ಫಂಗಸ್ ಎಂಬುದು ಖಚಿತಪಟ್ಟಿತ್ತು. ಅಲ್ಲಿಯೂ ಚಿಕಿತ್ಸೆ ಸಿಗಲಿಲ್ಲ. ಕೊನೆಯ ಪ್ರಯತ್ನವಾಗಿ ಖಾಸಗಿ ಆಸ್ಪತ್ರೆಯ ಚೇರ್ಮನ್ ಅವರನ್ನು ಸಂಪರ್ಕಿಸಿ, ಜೂ.4ರಂದು ದಾಖಲಿಸಲಾಯಿತು. ವಿಶೇಷ ಕಾಳಜಿ ವಹಿಸಿದ ಪರಿಣಾಮ ಸಂಪೂರ್ಣ ಚೇತರಿಸಿಕೊಂಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
12 ವೈದ್ಯರಿಂದ 4 ತಾಸು ಶಸಚಿಕಿತ್ಸೆ : ಚಿಕಿತ್ಸೆಯ ಕುರಿತು ಮಾಹಿತಿ ನೀಡಿದ ಡಾ. ಬ್ರಿಜೇಶ್, ಜೂ.7ರಂದು 12 ವೈದ್ಯರ ತಂಡ 4 ಗಂಟೆ ದವಡೆ, ಮೂಗು ಹಾಗೂ ಕಣ್ಣಿನ ಸುತ್ತ ಶಸಚಿಕಿತ್ಸೆ ಮಾಡಿ, ಬ್ಲ್ಯಾಕ್ ಫಂಗಸ್ ಅನ್ನು ಸಂಪೂರ್ಣ ಹೊರತೆಗೆದವು. ಶಸಚಿಕಿತ್ಸೆ ನಂತರದಲ್ಲಿ ನಾಗರಾಜರೆಡ್ಡಿ ಅವರಿಗೆ ಅಗತ್ಯ ಚುಚ್ಚುಮದ್ದು ನೀಡಲಾಗಿದೆ. ಈಗ ಅವರು ಸಂಪೂರ್ಣ ಚೇತರಿಸಿಕೊಂಡಿದ್ದಾರೆ ಎಂದು ವಿವರಿಸಿದರು.