

ಗುಳೇದಗುಡ್ಡ: ಕೇವಲ ಬೆಂಗಳೂರಿಗಷ್ಟೇ ಸೀಮಿತವಾಗಿದ್ದ ಚಲನಚಿತ್ರ ಉದ್ಯಮಕ್ಕೆ ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕದ ನಿರ್ಮಾಪಕರು, ಕಲಾವಿದರು ಚಲನಚಿತ್ರ ನಿರ್ಮಿಸಲು ಆಸಕ್ತಿ ತೋರಿಸುತ್ತಿರುವುದು ಹರ್ಷದ ಸಂಗತಿ ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು.
ಪಟ್ಟಣದ ಅಂಕಿತಾ ಚಿತ್ರಮಂದಿರದಲ್ಲಿ ಭಾನುವಾರ ಸಂಜೆ ನಾಗರಾಜ ಮುಳಗುಂದ ಕಥೆ ಬರೆದು ನಿರ್ಮಿಸಿರುವ ‘ಒಲವಿನ ಪಯಣ’ ಚಿತ್ರದ ಹಾಡು ಹಾಗೂ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿ, ಮುಳಗುಂದ ಅವರ ಚಲನಚಿತ್ರ ಉದ್ಯಮದಲ್ಲಿ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿ, ಪಟ್ಟಣದಲ್ಲಿ ಸಾಕಷ್ಟು ರಂಗಭೂಮಿ ಕಲಾವಿದರಿದ್ದು ನಮ್ಮ ನಿರ್ಮಾಪಕರು ಸ್ಥಳೀಯ ಕಲಾವಿದರಿಗೂ ಅವಕಾಶ ನೀಡಲಿ ಎಂದು ಸಲಹೆ ನೀಡಿದರು.
ಚಿತ್ರ ನಿರ್ಮಾಪಕ ನಾಗರಾಜ ಮುಳಗುಂದ ಮಾತನಾಡಿ, ನಾನು ರಂಗಭೂಮಿ ಕಲಾವಿದನ ಮಗ. ಹೀಗಾಗಿ ಸಿನಿಮಾ, ನಾಟಕಗಳತ್ತ ಹೆಚ್ಚು ಆಸಕ್ತಿ ಇತ್ತು. ನಾನು ಚಲನಚಿತ್ರಗಳನ್ನು ನೋಡುವಾಗ ಕಥೆಗಳನ್ನು ವಿಮರ್ಶೆ ಮಾಡುತ್ತ ನಾನೇ ಏಕೆ ಕಥೆ ಬರೆದು ಚಲನಚಿತ್ರ ನಿರ್ಮಿಸಬಾರದು ಎಂದು ಚಿತ್ರಕಥೆ ಬರೆದು ‘ಒಲವಿನ ಪಯಣ’ ಚಿತ್ರ ಮಾಡಿದ್ದು, ಇದು ರಾಜ್ಯಾದ್ಯಂತ ೆ. 21 ರಂದು ಬಿಡುಗಡೆಗೊಳ್ಳಲಿದ್ದು, ಚಿತ್ರದ ನಾಯಕ ಸುನೀಲ್, ಹಾಗೂ ನಾಯಕಿ ಅಕುಷಿ ಅತ್ಯುತ್ತಮವಾಗಿ ನಟಿಸಿದ್ದು, ಹಾಡುಗಳು ಮೋಹಕವಾಗಿದೆ. ಎಲ್ಲರೂ ಚಿತ್ರವನ್ನು ಸಿನಿಮಾ ಮಂದಿರಕ್ಕೆ ಬಂದು ನೋಡಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಜಾನಪದ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗುರುರಾಜ ಹೊಸಕೋಟಿ ಕಾರ್ಯಕ್ರಮ ಉದ್ಘಾಟಿಸಿ, ನಾಗರಾಜ ಮುಳಗುಂದ ತಾವೇ ಕಥೆ ಬರೆದು, ಚಲನಚಿತ್ರ ನಿರ್ಮಿಸಿರುವುದು ಹೆಮ್ಮೆಯ ವಿಷಯ. ಚಿತ್ರ ನಿರ್ಮಿಸುವುದು ಸಾಮಾನ್ಯ ಕೆಲಸವಲ್ಲ. ದೊಡ್ಡ ಸಾಹಸಕ್ಕೆ ಕೈಹಾಕಿದ್ದಾರೆ. ಅವರಿಗೆ ಯಶಸ್ಸು ದೊರೆತು ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಕಥೆಗಳನ್ನು ಬರೆದು ಚಲನಚಿತ್ರ ರಂಗಕ್ಕೆ ನೀಡಲಿ ಎಂದು ಹಾರೈಸಿದರು.
ಹಳೆಹುಬ್ಬಳ್ಳಿಯ ವೀರಭಿಕ್ಷಾವರ್ತಿ ನೀಲಕಂಠಮಠದ ಜ. ಶಿವಶಂಕರ ಶಿವಾಚಾರ್ಯ ಸ್ವಾಮಿಗಳು, ಮುರುಘಾ ಮಠದ ಕಾಶೀನಾಥ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಚಿತ್ರದ ನಾಯಕಿ ಅಕುಷಿ, ನಿರ್ದೇಶಕ ಕಿಶನ್ ಬಲ್ಲನಾಡ, ಸಂಗೀತ ನಿರ್ದೇಶಕ ಸಾಯಿ ಸರ್ವೇಶ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ, ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ಈರಣ್ಣ ಹಳ್ಳಿ, ಲಕ್ಷ್ಮೀ ಬ್ಯಾಂಕ್ ನಿರ್ದೇಶಕ ಸಂಪತ್ತ ಕುಮಾರ ರಾಠಿ, ಸಂಜಯ ಕಾರಕೂನ, ಮಹೇಶ ಬಿಜಾಪೂರ, ವಿಜಯಕುಮಾರ ಬೆಟಗೇರಿಗೌಡ್ರ, ನ್ಯಾಯವಾದಿ ತಮ್ಮಣ್ಣೆಪ್ಪ ಬೆನಕಟ್ಟಿ, ಬಿಜೆಪಿ ನಾಯಕಿ ಶಾಲಿನಿ ಈಳಗೇರ, ಪತ್ರಕರ್ತ ಬಸವರಾಜ ಯಂಡಿಗೇರಿ, ಸಂಗಮೇಶ ಚಿಕ್ಕಾಡಿ, ಶ್ರೀಕಾಂತ ಹುನಗುಂದ ಮತ್ತಿತರರಿದ್ದರು.