

ತುಮಕೂರು: ಶಿರಾ ಉಪಸಮರದಲ್ಲಿ ಯಾದವ ಸಮುದಾಯದ ಒಲೈಕೆ ನೆರೆಯ ಆಂಧ್ರದವರೆಗೂ ವಿಸ್ತರಿಸಿದ್ದು ಎಪಿಸಿಸಿ ಮಾಜಿ ಅಧ್ಯಕ್ಷ ರಘುವೀರರೆಡ್ಡಿ ಅವರನ್ನು ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಶುಕ್ರವಾರ ಭೇಟಿಯಾಗಿ ಚರ್ಚಿಸಿರುವುದು ಕಾಂಗ್ರೆಸ್ ವಲಯದಲ್ಲಿ ಆತಂಕ ಮೂಡಿಸಿದೆ.
ಶಿರಾದಲ್ಲಿ ಡಾ.ರಾಜೇಶ್‌ಗೌಡ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಹಾಜರಿದ್ದು ನಂತರ ಜಿಲ್ಲೆಯಲ್ಲಿ ಗಡಿಯಲ್ಲಿರುವ ಮಡಕಶಿರಾ ತಾಲೂಕು ನೀಲಕಂಠಾಪುರಕ್ಕೆ ಭೇಟಿ ನೀಡಿದ್ದ ಡಿಸಿಎಂ ಅಶ್ವತ್ಥ್‌ನಾರಾಯಣ ಕಾಂಗ್ರೆಸ್ ಪ್ರಭಾವಿ ಮುಖಂಡ ರಘುವೀರರೆಡ್ಡಿ ಅವರನ್ನು ಭೇಟಿಯಾಗಿರುವುದು ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.
ಯಾದವ ಸಮುದಾಯದ ರಘುವೀರರೆಡ್ಡಿ ಆಂಧ್ರದವರಾದರೂ ಗಡಿ ತಾಲೂಕುಗಳಾದ ಶಿರಾ, ಮಧುಗಿರಿ, ಪಾವಗಡ, ಚಳ್ಳಕೆರೆ, ಹಿರಿಯೂರು ತಾಲೂಕುಗಳಲ್ಲಿ ದಟ್ಟವಾಗಿರುವ ಯಾದವ ಸಮುದಾಯದ ಪ್ರಭಾವಿ ಮುಖಂಡರು. ಹಿಂದೆಲ್ಲಾ ಕಾಂಗ್ರೆಸ್‌ನ್ನ ಸ್ಟಾರ್ ಕ್ಯಾಂಪೈನರ್ ಆಗಿದ್ದವರು.
ಪ್ರಸ್ತುತ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರು ರಘುವೀರರೆಡ್ಡಿ ಅವರನ್ನು ಸಂಪರ್ಕಿಸಲು ತಡಮಾಡಿದ್ದನ್ನು ಗಮನಿಸಿದ್ದ ಬಿಜೆಪಿ ರಾಜಕೀಯ ತಂತ್ರಗಾರಿಕೆ ಬಳಸಿದ್ದು, ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸುವಂತೆ ಮಾಡಿರುವುದು ಕಾಂಗ್ರೆಸ್ ಪಾಳಯಕ್ಕೆ ದೊಡ್ಡ ಹಿನ್ನೆಡೆಯಾಗಿದೆ.
ಶುಕ್ರವಾರ ನೀಲಾಕಂಠಾಪುರದ ದೇವಸ್ಥಾನಕ್ಕೆ ಭೇಟಿ ನೀಡುವ ನೆಪದಲ್ಲಿ ಗೊಲ್ಲ ಸಮುದಾಯದ ಮುಖಂಡ ರಘುವೀರಾರೆಡ್ಡಿ ಅವರನ್ನು ಭೇಟಿಯಾದ ಅಶ್ವತ್ಥ್ ನಾರಾಯಣ ಮಧ್ಯಾಹ್ನದ ಭೋಜನವನ್ನು ಅವರ ಮನೆಯಲ್ಲಿಯೇ ಮಾಡಿದ್ದು ಆತ್ಮೀಯತೆಯಿಂದ ಮಾತನಾಡಿ ತೆರಳಿದ್ದು ಕಾಂಗ್ರೆಸ್ ಅಭ್ಯರ್ಥಿಯ ನಿದ್ದೆಕೆಡಿಸಿದೆ.
ಶಿರಾ ಉಪಸಮರದಲ್ಲಿ ಗೆಲ್ಲಲು ಕಾಡುಗೊಲ್ಲರ ಮತಗಳೇ ನಿರ್ಣಾಯಕವಾಗಿದ್ದು ಎಲ್ಲಾ ಪಕ್ಷಗಳು ಈಗಾಗಲೇ ಇವರ ಓಲೈಕೆಗೆ ನಿಂತಿವೆ, ಬಿಜೆಪಿ ಇತ್ತೀಚೆಗಷ್ಟೇ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿ ಮತ ಕೇಳುತ್ತಿದೆ ಇದರ ಜತೆಗೆ ರಘುವೀರರೆಡ್ಡಿ ಭೇಟಿ ಹೊಸ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗುವ ಸಾಧ್ಯತೆ ಮೂಡಿಸಿದೆ.
ಕೆ.ಎನ್.ರಾಜಣ್ಣ ಪರಮಾಪ್ತನ ಉಪಸ್ಥಿತಿ!: ಅಶ್ವತ್ಥ್ ನಾರಾಯಣ ಹಾಗೂ ರಘುವೀರರೆಡ್ಡಿ ಅವರ ಸುಧೀರ್ಘ ಮಾತುಕತೆಯ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ಅವರ ಪರಮಾಪ್ತ ಜಿ.ಜೆ.ರಾಜಣ್ಣ ಉಪಸ್ಥಿತಿ ಸಾಕಷ್ಟು ಆಶ್ಚರ್ಯ ಮೂಡಿಸಿದೆ. ಶಿರಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ರಾಜಣ್ಣ ಪುತ್ರ ಆರ್.ರಾಜೇಂದ್ರ ಅತ್ಯುತ್ಸಾಹದಿಂದ ಓಡಾಡುತ್ತಿರುವ ನಡುವೆಯೇ ಜಿ.ಜೆ.ರಾಜಣ್ಣ ಬಿಜೆಪಿ ಮುಖಂಡರು ಭಾಗವಹಿಸಿದ್ದ ಸಂದರ್ಭದಲ್ಲಿ ಉಪಸ್ಥಿತರಿದ್ದಿದ್ದು ವಿವಿಧ ರಾಜಕೀಯ ಊಹಾಪೋಹದ ವ್ಯಾಖ್ಯಾನಗಳಿಗೆ ಕಾರಣವಾಗಿದೆ.