

ಸಿಂಧನೂರು: ತಾಲೂಕಿನ ಒಳಬಳ್ಳಾರಿ ಗ್ರಾಮದ ಸುವರ್ಣಗಿರಿ ವಿರಕ್ತಮಠದ ಲಿಂ.ಚನ್ನಬಸವ ಶಿವಯೋಗಿಗಳ ಜಾತ್ರೋತ್ಸವ ಅಂಗವಾಗಿ ಸೋಮವಾರ ಸಂಜೆ ಮಹಿಳೆಯರಿಂದ ಲಘು ರಥೋತ್ಸವ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆ ಲಿಂ.ಚನ್ನಬಸವ ಶಿವಯೋಗಿಗಳ ಮೂರ್ತಿಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿಸಲಾಯಿತು. ಸಂಜೆ ಶ್ರೀಮಠದ ಸಿದ್ಧಲಿಂಗ ಶ್ರೀಗಳ ಸಮ್ಮುಖದಲ್ಲಿ ನೂರಾರು ಮಹಿಳೆಯರು ಲಘು ರಥ ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು. ಭಕ್ತರು ಜಯಘೋಷ ಹಾಕಿ, ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಅರ್ಪಿಸಿದರು.
ಅಡವಿ ಅಮರೇಶ್ವರದ ಶಾಂತಮಲ್ಲ ಶಿವಾಚಾರ್ಯರು, ಯದ್ದಲದೊಡ್ಡಿ ಮಹಾಲಿಂಗಸ್ವಾಮೀಜಿ, ಕರೇಗುಡ್ಡ ಮಹಾಂತ ಶಿವಾಚಾರ್ಯರು, ಸಂತೆಕೆಲ್ಲೂರು ಗುರುಬಸವ ಸ್ವಾಮೀಜಿ, ಹಳೆಕೋಟೆ ಸಿದ್ಧಬಸವ ಸ್ವಾಮೀಜಿ, ಒಳಬಳ್ಳಾರಿ ಬಸವಲಿಂಗ ಸ್ವಾಮೀಜಿ, ಖೇಳಗಿ ಶಿವಲಿಂಗಸ್ವಾಮೀಜಿ, ಅಡವಿ ಅಮರೇಶ್ವರದ ತೋಂಟದಾರ್ಯ ಸ್ವಾಮೀಜಿ, ಜಿಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಜಿಪಂ ಮಾಜಿ ಸದಸ್ಯ ಅಮರೇಗೌಡ ವಿರುಪಾಪುರ, ಮಾಜಿ ಶಾಸಕ ಚಂದ್ರಶೇಖರಯ್ಯಸ್ವಾಮಿ ಇತರರು ಪಾಲ್ಗೊಂಡಿದ್ದರು.