

ಬೆಂಗಳೂರು: ಭಾರತವೂ ಸೇರಿ ವಿಶ್ವದಾದ್ಯಂತ ಕಾರ್ಮಿಕರ ದಿನಾಚರಣೆ (ಮೇ ಡೇ) ಆಚರಿಸುತ್ತಿರುವ ಸಂದರ್ಭದಲ್ಲಿ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದು ತನ್ನ ಸಿಬ್ಬಂದಿ ಮರೆಯಲಾಗದ ಕೊಡುಗೆ ನೀಡಿ, ಆಘಾತ ಉಂಟು ಮಾಡಿದೆ ಎಂದು ಮಾಜಿ ಸಚಿವ, ಶಾಸಕ ಎಸ್.ಸುರೇಶ್‌ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಕೋರಮಂಗಲದಲ್ಲಿರುವ ಓಲಾ ಕ್ಯಾಬ್ಸ್ (ಎಎನ್‌ಐ ಟೆಕ್ನಾಲಜಿ ಪ್ರೈ.ಲಿಮಿಟೆಡ್) ಸಂಸ್ಥೆಯಲ್ಲಿ 200 ಕಾರ್ಮಿಕರನ್ನು ಮೇ ದಿನಾಚರಣೆಗೆ ಎರಡು ದಿನಗಳ ಹಿಂದೆ ವಿನಾಕಾರಣ ತೆಗೆದು ಹಾಕಲಾಗಿದೆ ಎಂದು ದೂರಿದ್ದಾರೆ.
ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಲಾಡ್‌ಗೆ ಈ ಕುರಿತು ಸುರೇಶ್ ಕುಮಾರ್ ಗುರುವಾರ ಪತ್ರ ಬರೆದಿದ್ದಾರೆ. ಕಾರ್ಮಿಕ ಕಾಯ್ದೆಯ ಎಲ್ಲ ನಿಯಮಗಳನ್ನು ಉಲ್ಲಂಸಿ, ಸಂಸ್ಥೆ ತೆಗೆದುಕೊಂಡಿರುವ ಈ ಕ್ರಮ ಯಾವುದೇ ಕಾರಣದಿಂದಲೂ ಸಹನೀಯವಲ್ಲ ಎಂದಿದ್ದಾರೆ.
ಯಾವುದೇ ತಪ್ಪಿಲ್ಲದೆ ಬೀದಿಗೆ ಬಿದ್ದಿರುವ 200 ಕುಟುಂಬಗಳ ನೆರವಿಗೆ ಸರ್ಕಾರ ಧಾವಿಸಬೇಕು. ಈ ಇನ್ನೂ ವ್ಯಕ್ತಿಗಳನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಸೂಕ್ತ ಪರಿಹಾರ ಕೊಟ್ಟು ಇಷ್ಟು ವರ್ಷ ಕೆಲಸ ಮಾಡಿದವರಿಗೆ ಗೌರವದಿಂದ ವಿದಾಯ ನೀಡುವಂತೆ ಸರ್ಕಾರ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಇದೇ ರೀತಿ ಕಾರ್ಯ ವಿರೋಧಿ ಪ್ರಕರಣಗಳು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ತೀರಾ ಹೆಚ್ಚಾಗುತ್ತಿದೆ. ಸರ್ಕಾರ ಮಧ್ಯೆ ಪ್ರವೇಶಿಸಿ ಕಾರ್ಮಿಕರಿಗೆ ತಕ್ಷಣ ಕೊಡುವ ಕಾರ್ಯಮಾಡಬೇಕು ಎಂದು ಶಾಸಕ ಎಸ್.ಸುರೇಶ್‌ಕುಮಾರ್ ಸಲಹೆ ನೀಡಿದ್ದಾರೆ.